ಬೆಂಗ್ಳೂರಲ್ಲಿ ಮುಂದಿನ ತಿಂಗ್ಳು ವರುಣನ ರೌದ್ರ ದರ್ಶನ- 60 ಪ್ರದೇಶ ಡೇಂಜರಸ್ ಅಂತ ಘೋಷಣೆ!

By
3 Min Read

ಬೆಂಗಳೂರು: ಕೇರಳ ಹಾಗೂ ಕೊಡಗಿನಲ್ಲಿ ವರುಣನ ರೌದ್ರ ಅವತಾರದ ದರ್ಶನವಾಗಿದೆ. ಮಳೆ ಹೊಡೆತಕ್ಕೆ ಇಡೀ ಕೇರಳ ತತ್ತರಿಸಿ ಹೋಗಿದೆ. ಕೊಡಗಿನ ಚಿತ್ರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕೊಡಗು ಕೇರಳದ ನಂತರ ವರುಣ ಇದೇ ಅಬ್ಬರದಲ್ಲಿ ಬೆಂಗಳೂರನ್ನು ತೋಯಲಿದ್ದಾನೆ. ಈ ಆತಂಕಕ್ಕೆ ಕಾರಣ ರಾಜ್ಯ ವಿಪತ್ತು ನಿರ್ವಹಣಾ ಘಟಕ ಮುನ್ನೆಚ್ಚರಿಕೆ ನೀಡಿದೆ.

ಬೆಂಗಳೂರಿನ ಭಾಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಳೆಯಾಗಲಿದೆ ಅನ್ನೋದಾಗಿ ಹವಾಮಾನ ಇಲಾಖೆ ವರದಿ ನೀಡಿದೆ. ಜೊತೆ ಪ್ರತಿ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆ ಆಗಲಿದ್ದು ಅನಾಹುತಗಳಾಗೋ ಅವಕಾಶಗಳು ಹೆಚ್ಚಿವೆ ಹಾಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ವಿಪತ್ತು ನಿರ್ವಾಹಣ ಘಟಕ ಎಚ್ಚರಿಕೆ ನೀಡಿದ್ದು ಇದು ತೀವ್ರ ಆತಂಕಕ್ಕೆ ತಂದೊಡ್ಡಿದೆ.

ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಸಿಲಿಕಾನ್ ಸಿಟಿ ಮುಳುಗಿ ಹೋಗಿತ್ತು. ಕೆಲ ಪ್ರದೇಶಗಳು ದ್ವೀಪದಂತೆ ಆಗಿದ್ದವು. ಅದೆಷ್ಟೊ ಮನೆಗಳು ಮುಳುಗಿ ಹೋಗಿದ್ರೆ, ಬಿಲ್ಡಿಂಗ್ ಗಳು ಕುಸಿದಿದ್ದವು. ಪ್ರಾಣ ಹಾನಿ ಸಂಭವಿಸಿ ಕಷ್ಟ ನಷ್ಟಗಳಿಂದ ಬೆಂಗಳೂರು ಬೆಚ್ಚಿಬಿದಿತ್ತು. ರಾಜ್ಯದೆಲ್ಲೆಡೆ ಸರಾಸರಿಗಿಂತ ಅತ್ಯಧಿಕ ಮಳೆಯಾಗಿದೆ. ಎಲ್ಲ ನದಿಗಳು ತುಂಬಿ ತುಳುಕಿ ಪ್ರವಾಹ ಸೃಷ್ಟಿಯಾಗಿದ್ದು ಈ ಬಾರಿ ಬೆಂಗಳೂರಿನಲ್ಲಿ ಕಳೆದ ವರ್ಷದ ಚಿತ್ರಣ ಈ ವರ್ಷವೂ ಮರುಕಳಿಸಲಿದೆ ಎಂಬ ಭಯಂಕರ ಸುದ್ದಿ ಸ್ಫೋಟಗೊಂಡಿದೆ. ಈ ಮುನ್ಸೂಚನೆಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ನೀಡಿದ್ದಾರೆ.

ಕಳೆದ ವರ್ಷ ಸಾಮಾನ್ಯ ಮಳೆಗೆ ಕೋರಮಂಗಲದ ಎಸ್‍ಡಿ ಬೆಡ್ ನಲ್ಲಿ ಮನೆಗಳು ಮುಳುಗಿ ಹೋಗಿದ್ದವು. ಕುರುಬರ ಹಳ್ಳಿಯಲ್ಲಿ ದೇವಸ್ಥಾನದ ಅರ್ಚಕರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ರು. ಅಲ್ಲದೇ ತಾಯಿ ಮಗಳನ್ನು ರಾಜಕಾಲುವೆ ಬಲಿ ಪಡೆದಿತ್ತು. ಅಂದು ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾಗಿ ಬಿಜೆಪಿಯ ಎಲ್ಲ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸಿದ್ದು ಬಿಟ್ರೆ ದುರಸ್ತಿ ಕಾರ್ಯ ಯಾರೂ ಮಾಡಲಿಲ್ಲ.

ಇಷ್ಟೆಲ್ಲ ಆದರೂ ಬುದ್ಧಿ ಕಲಿಯದ ಬಿಬಿಎಂಪಿ ಈ ಬಾರಿಯೂ ರಾಜಕಾಲುವೆಗಳ ಹೂಳೆತ್ತಿಲ್ಲ. ಇನ್ನು ಎರಡು ವರ್ಷಗಳ ಹಿಂದೆ ಶುರುವಾದ ರಾಜಕಾಲೂವೆ ಒತ್ತುವರಿ ತೆರವು ಸದ್ಯ ದೊಡ್ಡವರ ಮನೆ ಬಾಗಿಲಿಗೆ ಬಂದು ಸದ್ದು ಮಾಡದೆ ನಿಂತಿದೆ. ಇದೆಲ್ಲದರ ಮಧ್ಯೆ ಇದೀಗ ಐಟಿ-ಬಿಟಿ ಸಿಟಿಯಲ್ಲಿ ವರುಣನ ಆರ್ಭಟದ ಮುನ್ಸೂಚನೆ ಸಿಕ್ಕಿದ್ದು, ಬಿಬಿಎಂಪಿ ತಯಾರಿ ಶುರು ಮಾಡಿದೆ ಹಾಗೂ ಬೆಂಗಳೂರಿನ 60 ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಿಂದ ಹಾನಿಯಾಗುವ ಪ್ರದೇಶ:

ಕಿನೋ ಥೇಟರ್ ಅಂಡರ್ ಪಾಸ್, ಶಿವಾನಂದ ಸರ್ಕಲ್, ಓಕಳಿಪುರಂ ಅಂಡರ್ ಪಾಸ್, ಕೋರಮಂಗಲ, ಈಜಿಪುರ, ಶಾಂತಿನಗರ, ಕೆಎಸ್.ಆರ್.ಟಿ.ಸಿ ಡಿಪೋ, ಮಾಗಡಿ ರಸ್ತೆ, ವಿಜಯನಗರ, ಬಾಪೂಜಿನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ನಾಯಂಡಹಳ್ಳಿ, ಗಂಗೊಂಡನಹಳ್ಳಿ, ಹೆಚ್.ಎಸ್.ಆರ್ ಲೇಔಟ್,  ಥಣಿಸಂದ್ರ, ಎಲಿಮೆಂಟ್ಸ್ ಮಾಲ್, ಕೋಡಿಚಿಕ್ಕನಹಳ್ಳಿ, ಆನಂದ್ ರಾವ್ ಸರ್ಕಲ್, ಹಲಸೂರು ಡಬ್ಬಲ್ ರೋಡ್, ಶಂಕರಮಠ, ಕೆಂಪೇಗೌಡ ಲೇಔಟ್, ವಿಲ್ಸನ್ ಗಾರ್ಡನ್, ಅರಕೆರೆ, ಕುರಬರಹಳ್ಳಿ, ಹೆಚ್.ಆರ್.ಬಿ.ಆರ್.ಲೇಔಟ್, ನಂದಿನಿ ಲೇಔಟ್, ಲಗ್ಗೆರೆ.

ಈ ಪ್ರದೇಶಗಳಲ್ಲಿ ಬಿಬಿಎಂಪಿ ಆಯುಕ್ತರು ಹೈ ಅರ್ಲಟ್ ಘೋಷಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ವಾಡಿಕೆ ಮಳೆ 460 ಮಿ.ಮೀ ಆಗಬೇಕು. ಆದರೆ ಕಳೆದ ವರ್ಷ 667 ಮಿ.ಮೀ ಮಳೆ ಸಂಭವಿಸಿತ್ತು. ಅಂದರೆ ಶೇಕಡ 45 ರಷ್ಟು ಹೆಚ್ಚು ಸುರಿದ ಮಳೆಯಿಂದ ಬೆಂಗಳೂರು ಮುಳುಗಡೆಯಾಗಿತ್ತು. ಇದು ಕಳೆದ 17 ವರ್ಷಗಳ ದಾಖಲೆಯ ಮಳೆಯಾಗಿತ್ತು. ಈ ವರ್ಷ ದಾಖಲೆಯನ್ನು ಮುರಿಯುವ ಲಕ್ಷಣಗಳು ಗೋಚರಿಸಿವೆ. ಯಾಕಂದರೆ ಈಗಾಗಲೇ ಮಳೆಗಾಲದ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ.

ಜೂನ್ ತಿಂಗಳಿನಿಂದ ಸಪ್ಟೆಂಬರ್ ವೇಳೆಗೆ ರಾಜಧಾನಿ ಬೆಂಗಳೂರಿಗೆ 90 ಸೆ.ಮೀ ಮಳೆಯಾಗುವುದು ವಾಡಿಕೆ. ಆದರೆ ನಗರದಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಸೇರಿ ಆಗಾಗ್ಗೆ ಸುರಿಯುತ್ತಿದ್ದ ಮಳೆಯಿಂದ ವಾಡಿಕೆ ಮಳೆಯ ಕಾಲು ಭಾಗ ಮಳೆ ಈಗಾಗಲೇ ಬಿದ್ದಿದೆ. ಮಳೆ ಹೀಗೆ ಮುಂದುವರಿದರೆ ಕಂಟಕ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ನೀಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
2 Comments

Leave a Reply

Your email address will not be published. Required fields are marked *