60 ದಿನಗಳ ಬಳಿಕ ಮತ್ತೆ ಪಾಸಿಟಿವ್ ಪ್ರಕರಣ- ಕೊಡಗಿಗೆ ಮತ್ತೊಂದು ಗಂಡಾಂತರ ಕಾದಿದೆಯಾ?

Public TV
1 Min Read

ಮಡಿಕೇರಿ: ಕಳೆದ 60 ದಿನಗಳಿಂದ ಗ್ರೀನ್‍ಝೋನ್‍ನಲ್ಲಿದ್ದ ಕೊಡಗು ಜಿಲ್ಲೆಗೆ ಮತ್ತೆ ಆತಂಕ ಎದುರಾಗಿದೆ. ಮುಂಬೈನಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೇ 16 ರಂದು 45 ವಯಸ್ಸಿನ ಮಹಿಳೆಯೊಬ್ಬರು, ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ಅಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದ ಮಹಿಳೆ, ಅಲ್ಲಿಂದ ಕ್ಯಾಬ್ ಮಾಡಿಕೊಂಡು ಕೊಡಗು ಜಿಲ್ಲೆಯ ಚೆಕ್ ಪೋಸ್ಟ್ ಸಂಪಾಜೆಗೆ ಬಂದಿದ್ದರು.

ಸಂಪಾಜೆಯ ಚೆಕ್‍ಪೋಸ್ಟ್‍ನಲ್ಲೂ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಪಿ-1,224 ಮಹಿಳೆಯನ್ನು ಅಲ್ಲಿಂದ ನೇರವಾಗಿ ಅಂಬ್ಯುಲೆನ್ಸ್ ಮೂಲಕ ಕೊಡಗಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಮಹಿಳೆಯ ವರದಿಯಲ್ಲಿ ಪಾಸಿಟಿವ್ ಬಂದಿರುವ ಪರಿಣಾಮ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಮೇ 5ರಿಂದ ಇದುವರೆಗೂ ಕೊಡಗು ಜಿಲ್ಲೆಗೆ 409 ಮತ್ತು ಹೊರ ಜಿಲ್ಲೆಗಳಿಂದ 7,268 ಜನರು ಆಗಮಿಸಿದ್ದಾರೆ. ಹೊರ ರಾಜ್ಯಗಳಿಂದ ಬಂದಿರುವವರಿಗೆ ಕ್ವಾರಂಟೈನ್ ಮಾಡಲಾಗಿದೆ.

ಆದರೆ ಹೊರ ಜಿಲ್ಲೆಗಳಿಂದ ಬಂದಿರುವವರಿಗೆ ಹೋಂ ಕ್ವಾರಂಟೈನ್ ಕೂಡ ಮಾಡಿಲ್ಲ. ಅವರು ಜಿಲ್ಲಿಯಲ್ಲೆಲ್ಲಾ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಒಂದು ಪ್ರಕರಣ ಪಾಸಿಟಿವ್ ಬಂದಿರುವಾಗಲೇ ಹೊರ ಜಿಲ್ಲೆಗಳಿಂದ ಬಂದಿರುವವರು ಆರಾಮಾಗಿ ಓಡಾಡಿಕೊಂಡಿರುವುದು ಜನರಿಗೆ ಮತ್ತಷ್ಟು ಆತಂಕ ಮೂಡುವಂತೆ ಮಾಡಿದೆ. ಹೀಗಾಗಿ ಹೊರ ಜಿಲ್ಲೆಗಳಿಂದಲೂ ಬಂದಿರುವವರಿಗೂ ಜಿಲ್ಲಾಡಳಿತ ಹೋಂಕ್ವಾರಂಟೈನ್ ಮಾಡುವ ಮೂಲಕ ಜಿಲ್ಲೆಯನ್ನು ಸಂರಕ್ಷಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಇತ್ತ ಪಾಸಿಟಿವ್ ಪ್ರರಕರಣದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಂಬೈನಿಂದ ಕೊಡಗಿಗೆ ಬಂದಿದ್ದ 45 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಆದರೆ ಜಿಲ್ಲೆಯ ಜನರಿಗೆ ಯಾವುದೇ ಪ್ರಾಥಮಿಕ ಸಂಪರ್ಕ ಇಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇನ್ನೂ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ಬರುವ ನಿರೀಕ್ಷೆ ಇದ್ದು, ಇನ್ನೂ ಪಾಸಿಟಿವ್ ವರದಿಗಳು ಬಂದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ 220 ಬೆಡ್ ಗಳ ಸಾಮರ್ಥ್ಯವಿದ್ದು, 11 ವೆಂಟಿಲೇಟರ್ ಗಳಿವೆ. ಅವುಗಳ ಮೂಲಕ 120 ಜನರಿಗೆ ಏಕಕಾಲದಲ್ಲಿ ಆಕ್ಸಿಜನ್ ಪೂರೈಸುವ ಸಾಮರ್ಥ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *