ಅಪ್ಪನಿಗೆ ಹೇಳ್ತೀನಿ ಎಂದಿದ್ದಕ್ಕೆ ತಾಯಿ, ಲವ್ವರ್ ಸೇರಿ 6ರ ಬಾಲಕಿಯನ್ನು ಕತ್ತು ಸೀಳಿ ಕೊಂದೇಬಿಟ್ರು!

By
2 Min Read

ನವದೆಹಲಿ: ತಾಯಿ ಹಾಗೂ ಆಕೆಯ ಪ್ರಿಯತಮ ಸೇರಿ 6 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ಘಾಜಿಪುರ್ ಎಂಬಲ್ಲಿ ಬುಧವಾರದಂದು ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸುಧೀರ್(23) ಎಂಬಿಬ್ಬರನ್ನು ಗುರುವಾರ ಬಂಧಿಸಿರುವುದಾಗಿ ಪೊಲೀಸ್ ಆಯಕ್ತ ಓಮ್ವೀರ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಏನಿದು ಪ್ರಕರಣ?: ದೆಹಲಿಯ ಘಾಜಿಪುರ್ ನಲ್ಲಿ ಮಹಿಳೆ ತನ್ನ ಗಂಡ ಹಾಗೂ ಇಬ್ಬರು ಗಂಡು ಹಾಗೂ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದಳು. ಮಹಿಳೆಯ ಪತಿ ಬಂಡಿ ಎಳೆಯುವ ಕೆಲಸ ಮಾಡುತ್ತಿದ್ದರು. ಆರೋಪಿ ಸುಧೀರ್ ಕಾರ್ಮಿಕನಾಗಿದ್ದು, ಇವರ ಮನೆಯ ಹತ್ತಿರದಲ್ಲೇ ವಾಸವಾಗಿದ್ದ. ಮಹಿಳೆ ಸುಧೀರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮಹಿಳೆಯ ಪತಿ ಬುಧವಾರ ಸಂಜೆ ಮದ್ಯಪಾನ ಮಾಡಲು ಬಾರ್‍ಗೆ ಹೋಗಿದ್ದಾಗ ಸುಧೀರ್ ಮಹಿಳೆಯ ಮನೆಗೆ ಬಂದಿದ್ದ. ಈ ವೇಳೆ 4 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳು ಕೋಣೆಯಲ್ಲಿ ಟಿವಿ ನೋಡುತ್ತಿದ್ದರು. ಆದ್ರೆ ಹೆಣ್ಣು ಮಗಳು ತನ್ನ ಅಮ್ಮ ಸುಧೀರ್ ಜೊತೆ ಸರಸ ಸಲ್ಲಾಪದಲ್ಲಿರುವುದನ್ನ ನೋಡಿದ್ದಳು. ಅಲ್ಲದೇ ನಾನು ಇದನ್ನು ಅಪ್ಪನಿಗೆ ಹೇಳುತ್ತೇನೆ ಎಂದಿದ್ದಳು.

ಇದರಿಂದ ಅತಂಕಗೊಂಡ ತಾಯಿ ಮತ್ತು ಆಕೆಯ ಪ್ರಿಯಕರ ಮಗಳನ್ನು ಕೊಲೆ ಮಾಡಲು ಯೋಜನೆ ಹಾಕಿದ್ರು. ಅಂತೆಯೇ ಪಕ್ಕದ ಮನೆಯ ಟೆರೇಸ್ ಗೆ ಕರೆದುಕೊಂಡು ಹೋಗಿ ಅಮ್ಮ ಹಾಗೂ ಪ್ರಿಯಕರ ಸೇರಿ ಚಾಕುವಿನಿಂದ ಕತ್ತನ್ನು ಸೀಳಿ ಬಾಲಕಿಯನ್ನು ಕೊಲೆಗೈದಿದ್ದಾರೆ. ಸುಧೀರ್ ಮಗುವಿನ ಕತ್ತು ಸೀಳಿದ್ರೆ ಮಹಿಳೆ ಮಗಳ ಕೈಗಳನ್ನ ಹಿಡಿದುಕೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಕೃತ್ಯ ಎಸಗಿದ ಬಳಿಕ ಸುಧೀರ್ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಬಾಲಕಿ ನಾಪತ್ತೆಯಾಗಿದ್ದಾಳೆ ಅಂತ ಮಹಿಳೆ ಅಕ್ಕಪಕ್ಕದ ಮನೆಯವರಿಗೆ ಹೇಳಿದ್ದಾಳೆ. ನಂತರ ಗಂಡ ಹಾಗೂ ಇತರರ ಜೊತೆ ಸೇರಿ ಮಗಳನ್ನು ಹುಡುಕೋ ನಾಟಕವಾಡಿದ್ದಾಳೆ.

ರಾತ್ರಿ 10 ಗಂಟೆ ಸುಮಾರಿಗೆ ಬಾಲಕಿ ನಾಪತ್ತೆಯಾಗಿರೋ ಬಗ್ಗೆ ಪೊಲೀಸರಿಗೂ ಕರೆ ಮಾಡಿ ತಿಳಿಸಿದ್ದಾರೆ. ಹೀಗಾಗಿ ಕೂಡಲೆ ಪೊಲೀಸರು ತಂಡಗಳನ್ನು ರಚಿಸಿ ಬಾಲಕಿಯ ಹುಡುಕಾಟ ಆರಂಭಿಸಿದ್ದಾರೆ. ತಡರಾತ್ರಿ ಸುಮಾರು 1.30ರ ವೇಳೆಗೆ ನೆರಮನೆಯ ಟೆರೇಸ್ ನಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಕೂಡಲೇ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ. ಬಳಿಕ ಪೊಲೀಸರು ಘಾಜಿಪುರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಸಂಬಂಧ ವಿಚಾರಣೆ ಮಾಡುವ ವೇಳೆ ಆರೋಪಿ ಮಹಿಳೆ ತಾನೇನೂ ಮಾಡೇ ಇಲ್ಲ ಎಂಬಂತೆ ಆರಾಮಾಗಿ ಇದ್ದಳು. ಆದ್ರೆ ಈಕೆಗೆ ಸುಧೀರ್ ಜೊತೆ ಅಕ್ರಮ ಸಂಬಂಧವಿತ್ತು ಎಂದು ನೆರೆಮನೆಯವರು ಮಾಹಿತಿ ನೀಡಿದ್ದು, ಮಹಿಳೆ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ನಂತರ ಇಬ್ಬರನ್ನೂ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಮಹಿಳೆ ತನ್ನ 4 ವರ್ಷದ ಗಂಡು ಮಗನಿಗೆ, ನಿನ್ನ ತಂಗಿಯನ್ನು ದೆವ್ವ ಹೊತ್ತುಕೊಂಡು ಹೋಗಿದೆ ಎಂದು ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *