ಶಾಲಾ ಕಟ್ಟಡದ ಮೇಲೆ ಬಿದ್ದ ಹೈಟೆನ್ಷನ್ ತಂತಿ – 55 ವಿದ್ಯಾರ್ಥಿಗಳಿಗೆ ಗಾಯ

Public TV
2 Min Read

ಲಕ್ನೋ: ಶಾಲಾ ಕಟ್ಟಡದ ಛಾವಣಿಯ ಮೇಲೆ 11,000 ಕೆವಿ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು, ಸುಮಾರು 55 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರದಂದು ಬಲರಾಂಪುರ ಜಿಲ್ಲೆಯ ಉಟ್ರೌಲಾದ ವಿಷ್ಣುಪುರ ಸರ್ಕಾರಿ ಪ್ರಾಥಮಿಕ ಕಟ್ಟಡದ ಛಾವಣಿಯ ಮೇಲೆ 11,000 ಕೆವಿಗೂ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು ಈ ಅವಘಡ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದರು ಎನ್ನಲಾಗಿದ್ದು, 55 ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಸದ್ಯ ಗಾಯಗೊಂಡ ಮಕ್ಕಳಲ್ಲಿ ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಕೆಲವರನ್ನು ಬಲರಾಂಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ನಾಲ್ಕು ಮಕ್ಕಳ ಸ್ಥಿತಿ ಗಂಭೀರವಾಗಿದೆ.

ಹೈಟೆನ್ಷನ್ ವೈರ್ ಶಾಲಾ ಕಟ್ಟಡದ ಮೇಲೆ ಬಿದ್ದ ತಕ್ಷಣವೇ ವಿದ್ಯುತ್ ಕಡಿತಗೊಳಿಸಿದ್ದರಿಂದ ಹೆಚ್ಚಿನ ಸಾವುನೋವುಗಳಾಗಿಲ್ಲ. ಈ ಬಗ್ಗೆ ತಿಳಿಯುತ್ತಿದ್ದಂತೆ ಆತಂಕಗೊಂಡ ಪೋಷಕರು ಶಾಲೆಗೆ ಧಾವಿಸಿದ್ದು, ಸಿಟ್ಟಿಗೆದ್ದು ಶಾಲಾ ಸಿಬ್ಬಂದಿ ಮೇಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಈ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡ ಬಲರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣ ಕರುಣೇಶ್ ಅವರು ಓರ್ವ ಗುತ್ತಿಗೆದಾರರನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕಿರಿಯ ಎಂಜಿನಿಯರ್ ವಿರುದ್ಧವೂ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಗಾಯಗೊಂಡಿರುವ ಶಾಲಾ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಈ ಅವಘಡ ಸಂಭವಿಸಿದ್ದು ಹೇಗೆ? ಕಾರಣವೇನು ಎನ್ನುವ ಬಗ್ಗೆ 24 ಗಂಟೆಗಳ ಒಳಗೆ ವರದಿಯನ್ನು ಸಲ್ಲಿಸಿ ಎಂದು ಮಧ್ಯಾಂಚಲ್ ವಿದ್ಯುತ್ ವಿತರಣಾ ನಿಗಮದ ಯೋಜನಾ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಅಲ್ಲದೇ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆಯನ್ನೂ ಕೂಡ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ನಿಗವಹಿಸಿ, ಜೊತೆಗೆ ಹೈಟೆನ್ಷನ್ ತಂತಿಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿ ಎಂದು ಸಿಎಂ ಉತ್ತರ ಪ್ರದೇಶ ವಿದ್ಯುತ್ ನಿಗಮದ ಪ್ರಧಾನ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *