ವರದಾ ನದಿಯ ಅಬ್ಬರ – 500 ಎಕರೆ ಭತ್ತದ ಗದ್ದೆ, ಅಡಿಕೆ ತೋಟಗಳು ಜಲಾವೃತ

Public TV
1 Min Read

ಕಾರವಾರ: ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹೋಬಳಿಯಲ್ಲಿ ವರದಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಮಳೆಯಿಂದಾಗಿ ತಗ್ಗಿನ ಪ್ರದೇಶಗಳೆಲ್ಲ ಜಲಾವೃತವಾಗಿದ್ದು, ಬನವಾಸಿ-ಅಜ್ಜರಣಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ವರದಾ ನದಿ ತನ್ನ ತಟದ 500 ಎಕರೆಗಳಷ್ಟು ಕೃಷಿ ಕ್ಷೇತ್ರವನ್ನು ಹಾನಿ ಮಾಡಿದೆ. ಇಲ್ಲಿನ ಜೀವನದಿ ವರದಾ ಅಬ್ಬರಿಸುತ್ತಿದ್ದು, ಭತ್ತದ ಗದ್ದೆ ಹಾಗೂ ಅಡಿಕೆ ತೋಟಗಳು ನದಿಯ ಪ್ರವಾಹದಲ್ಲಿ ಜಲಾವೃತವಾಗಿದೆ.

ಭಾಶಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೊಗಳ್ಳಿ, ಸಣ್ಣಕೇರಿ, ಅಜ್ಜರಣಿ, ತಿಗಣಿ, ಲಿಂಗನಕೊಪ್ಪ ಭಾಗದ ಕೃಷಿ ಭೂಮಿ ಅಕ್ಷರಶಃ ನೀರಿನಲ್ಲಿ ಮುಳುಗಿದೆ. ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ತಾಲೂಕಿನ ಪೂರ್ವ ಭಾಗಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ಭಾಗದ ಜನರು ಆತಂಕದಲ್ಲಿದ್ದಾರೆ. ಬನವಾಸಿ ಸಮೀಪದ ಅಜ್ಜರಣಿ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಸಾಗರ ಹಾಗೂ ಶಿವಮೊಗ್ಗದಲ್ಲಿ ಸುರಿದ ತೀವ್ರ ಮಳೆಯ ಪರಿಣಾಮವಾಗಿ ವರದಾನದಿ ತುಂಬಿ ಹರಿಯತೊಡಗಿದೆ. ಈ ಪ್ರದೇಶದಲ್ಲಿ ಬೆಳೆದ ಭತ್ತ, ಅನಾನಸ್ ಮತ್ತು ಶುಂಠಿ ಬೆಳೆಗಳು ವರದಾನದಿಯ ಪ್ರವಾಹಕ್ಕೆ ತುತ್ತಾಗಿದೆ. ಮಳೆಯ ತೀವ್ರತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ನದಿ ತಟದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನದಿ ತಟದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಮಳೆ ಹೆಚ್ಚಿದರೆ ಇನ್ನಷ್ಟು ಕೃಷಿ ಭೂಮಿ ಜಲಾವೃತವಾಗುವ ಆತಂಕ ಸೃಷ್ಟಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *