500ಕ್ಕೂ ಕೊರೊನಾ ವಾರಿಯರ್ ಸಾವು, ಸರ್ಕಾರದಿಂದ ಒಂದೇ ಕುಟುಂಬಕ್ಕೆ ಪರಿಹಾರ: ಹೆಚ್‍ಡಿಕೆ ಕಿಡಿ

Public TV
2 Min Read

– ಹೃದಯ ಹೀನ ಉತ್ತರ ಕೊಡುವ ಶಿಕ್ಷಣ ಸಚಿವರು

ಬೆಂಗಳೂರು: ರಾಜ್ಯದಲ್ಲಿ 500ಕ್ಕೂ ಹೆಚ್ಚು ಕೊರೊನಾ ವಾರಿಯರ್ ಗಳು ಪ್ರಾಣ ಕಳೆದುಕೊಂಡಿದ್ದು, ರಾಜ್ಯ ಸರ್ಕಾರ ಮಾತ್ರ ಒಂದೇ ಕುಟುಂಬಕ್ಕೆ ಪರಿಹಾರ ನೀಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಮ್ಮನ ಉಳಸಿಕೊಡಿ ಎಂದು ಮನವಿ ಮಾಡಿಕೊಂಡ ಪುತ್ರಿಗೆ ಶಿಕ್ಷಣ ಸಚಿವರು ಹೃದಯಹೀನ ಉತ್ತರ ನೀಡಿದ್ದಾರೆ. ಇಂತಹ ಸರ್ಕಾರದಿಂದ ಜನರು ಏನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕೊರೊನ ಸಂದರ್ಭದಲ್ಲೂ ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜೀವ ಪಣಕ್ಕಿಟ್ಟು ಕೆಲಸ ಮಾಡಿದ 500ಕ್ಕೂ ಹೆಚ್ಚು ಕೊರೊನ ವಾರಿಯರ್ ಗಳು ಜೀವ ಕಳೆದುಕೊಂಡಿದ್ದು, ಆ ಪೈಕಿ ಕೇವಲ ಒಂದೇ ಒಂದು ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ ಎಂಬ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಕೇವಲ ಬಾಯಿ ಚಪಲ ತೀರಿಸಿಕೊಳ್ಳಲು ಕೊರೊನ ವಾರಿಯರ್‍ಗಳನ್ನು ಭೇಷ್ ಎನ್ನುವ ಸರ್ಕಾರ, ಅವರ ಜೀವದ ಜತೆ ಆಟವಾಡುತ್ತಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕೊರೊನ ವಾರಿಯರ್ ಕುಟುಂಬಗಳಿಗೆ ತಾನೇ ಘೋಷಿಸಿದಂತೆ ಪರಿಹಾರ ಕೊಡದಿದ್ದರೆ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು?

ತನ್ನ ಹೆತ್ತ ತಾಯಿಯನ್ನು ಉಳಿಸಿಕೊಡಿ ಎಂದು ವಿದ್ಯಾಗಮ ಯೋಜನೆಯಡಿ ಕೆಲಸ ಮಾಡಿದ ಶಿಕ್ಷಕಿಯ ಪುತ್ರಿ ಸರ್ಕಾರಕ್ಕೆ ಪತ್ರ ಬರೆದರೆ, ಶಿಕ್ಷಕಿಯ ಚಿಕಿತ್ಸಾ ವೆಚ್ಚದ ಬಿಲ್ ಕೊಡುತ್ತೇನೆ ಎಂಬ ಹೃದಯಹೀನ ಉತ್ತರ ಕೊಡುವ ಶಿಕ್ಷಣ ಮಂತ್ರಿಯಿಂದ ಹಾಗೂ ಇಂತಹ ಮನಸ್ಥಿತಿಯ ಸರ್ಕಾರದಿಂದ ಕೊರೊನ ವಾರಿಯರ್ ಗಳ ಕುಟುಂಬಗಳು ಇನ್ನೇನು ನಿರೀಕ್ಷಿಸಲು ಸಾಧ್ಯ. 60 ವೈದ್ಯರು, 20 ನರ್ಸ್‍ಗಳು, 82 ಪೊಲೀಸರು, 10 ಪೌರ ಕಾರ್ಮಿಕರು, 96 ಚಾಲಕ-ನಿರ್ವಾಹಕರು, 235 ಶಿಕ್ಷಕರು- ಉಪನ್ಯಾಸಕರು, 10 ಆಶಾ ಕಾರ್ಯಕರ್ತೆಯರು ಹೀಗೆ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೂಡಬಿದಿರೆ ಶಿಕ್ಷಕಿ ನಿಧನ– ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ ವಿದ್ಯಾರ್ಥಿನಿ

ಇನ್ನು ಪತ್ರಕರ್ತರು, ಬ್ಯಾಂಕ್ ಸೇರಿದಂತೆ ವಿವಿಧ ಸೇವಾ ವಲಯದ ನೌಕರರು ಕೂಡ ಜೀವ ತೆತ್ತಿದ್ದಾರೆ. ಇವರ ಕುಟುಂಬಗಳಿಗೆ ಸರ್ಕಾರ ಉತ್ತರದಾಯಿತ್ವ ಪ್ರದರ್ಶಿಸಬೇಕಲ್ಲವೇ? ತಮಟೆ ಬಾರಿಸಿ, ದೀಪ ಹಚ್ಚಿ, ಜನಪ್ರಿಯತೆ ಗಳಿಸಿ, ಪೋಷಾಕು ಕೊಟ್ಟರೆ ಕೊರೊನ ವಾರಿಯರ್ ಗಳು ಹಾಗೂ ಅವರ ಕುಟುಂಬಗಳು ಹೇಗೆ ಸಮಾಧಾನ ಪಟ್ಟುಕೊಳ್ಳಬೇಕು? ಕನಿಷ್ಠ ಪಕ್ಷ ಕೊರೊನ ವಾರಿಯರ್ ಗಳ ಸುರಕ್ಷತೆಗೆ ಸರ್ಕಾರ ಕ್ರಮಕೈಗೊಳ್ಳಬೇಕು, ಅದನ್ನೂ ಮೀರಿ ಜೀವ ಕಳೆದುಕೊಳ್ಳುವ ಕುಟುಂಬಗಳಿಗೆ ಪರಿಹಾರ ಕೊಡದೇ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *