ಸಿಗರೇಟ್‌ ಸೇದುತ್ತಲೇ 42 ಕಿ.ಮೀ. ಮ್ಯಾರಥಾನ್‌ ಓಡಿದ 50ರ ವ್ಯಕ್ತಿ

Public TV
1 Min Read

ಬೀಜಿಂಗ್: ಚೀನಾದ (China) 50 ವಯಸ್ಸಿನ ವ್ಯಕ್ತಿಯೊಬ್ಬರು ಸಿಗರೇಟ್‌ (Cigarette) ಸೇದುತ್ತಾ 42 ಕಿ.ಮೀ. ಮ್ಯಾರಥಾನ್‌ (Marathon) ಓಡಿರುವ ಅಚ್ಚರಿದಾಯಕ ಘಟನೆ ನಡೆದಿದೆ.

ಮ್ಯಾರಥಾನ್ ಓಟದ ಪ್ರಮುಖ ಉದ್ದೇಶವೆಂದರೆ ಫಿಟ್‌ನೆಸ್ ಉತ್ತೇಜಿಸುವುದು ಮತ್ತು ಆರೋಗ್ಯ ಸುಧಾರಿಸುವುದು. ಮ್ಯಾರಥಾನ್ ಓಡುವುದು ಸುಲಭವಲ್ಲ. ಅದಕ್ಕೆ ತರಬೇತಿ ಮತ್ತು ಆರೋಗ್ಯಕರ ಜೀವನಶೈಲಿ ಮುಖ್ಯ. ಆದರೆ ಅಂಕಲ್‌ ಚೆನ್‌ ಎಂದೇ ಹೆಸರಾಗಿರುವ ಚೀನಾದ ವ್ಯಕ್ತಿ ಸಿಗರೇಟ್‌ ಸೇದುತ್ತಲೇ 42 ಕಿ.ಮೀ. ಮ್ಯಾರಥಾನ್‌ ಓಡಿದ್ದಾರೆ. ಇದನ್ನೂ ಓದಿ: ಆರ್ಥಿಕವಾಗಿ ಕಂಗೆಟ್ಟಿರುವ ವಿಶ್ವಕ್ಕೆ ಜಿ20 ಶೃಂಗಸಭೆಯಲ್ಲಿ ಸಿಗುತ್ತಾ ಬೂಸ್ಟರ್‌ ಡೋಸ್‌?

ಸಿಗರೇಟ್ ಸೇದುವುದು ದೈಹಿಕ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಧೂಮಪಾನ ಮಾಡುತ್ತಿದ್ದರೆ ಹೃದಯ, ಶ್ವಾಸಕೋಶಗಳು ಮತ್ತು ಸ್ನಾಯುಗಳಿಗೆ ಕಡಿಮೆ ಆಮ್ಲಜನಕ ಸಿಗುತ್ತದೆ. ಇದರಿಂದ ಓಡಲು ತುಂಬಾ ಕಷ್ಟವಾಗುತ್ತದೆ. ಅದರ ಹೊರತಾಗಿಯೂ 50 ವರ್ಷ ವಯಸ್ಸಿನ ಚೆನ್ ಚೀನಾದ ಜಿಯಾಂಡೆಯಲ್ಲಿ ಮ್ಯಾರಥಾನ್ ಓಡಿದ್ದಾರೆ. ಅವರು 3 ಗಂಟೆ 28 ನಿಮಿಷಗಳಲ್ಲಿ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಮಾರು 1,500 ಓಟಗಾರರಲ್ಲಿ ಈ ವ್ಯಕ್ತಿ 574 ನೇ ಸ್ಥಾನ ಪಡೆದಿದ್ದಾರೆ. ಮ್ಯಾರಥಾನ್‌ ಪೂರ್ಣಗೊಳಿಸುವಷ್ಟರಲ್ಲಿ ಒಂದು ಪ್ಯಾಕ್‌ ಸಿಗರೇಟ್‌ ಸೇದಿದ್ದಾರೆ.

ಅಂಕಲ್ ಚೆನ್ ಇಂತಹ ವಿಚಿತ್ರ ಸಾಹಸವನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ರನ್ನಿಂಗ್ ಮ್ಯಾಗಜೀನ್ ಪ್ರಕಾರ, ಅವರು ಸಿಗರೇಟ್‌ ಸೇದಿಯೇ 2018ರ ಗುವಾಂಗ್‌ಝೌ ಮ್ಯಾರಥಾನ್ ಮತ್ತು 2019 ರ ಕ್ಸಿಯಾಮೆನ್ ಮ್ಯಾರಥಾನ್ ಓಡಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲಿಯೇ ಅತೀ ಉದ್ದದ ಮೂಗಿನ ವ್ಯಕ್ತಿ – ಫೋಟೋ ವೈರಲ್

ಅಂಕಲ್ ಚೆನ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಅನೇಕರು ಇದನ್ನು ಹಾಸ್ಯ ಮಾಡಿದ್ದಾರೆ. ʼಇಂತಹ ಕೃತ್ಯಗಳು ಕೆಟ್ಟ ನಿದರ್ಶನʼ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *