– ಭಾರತ ತನ್ನ ರೈತರನ್ನು ರಕ್ಷಿಸುವ ಗುರಿ ಹೊಂದಿದೆ; ವರದಿಯಲ್ಲಿ ಉಲ್ಲೇಖ
ವಾಷಿಂಗ್ಟನ್: ಭಾರತ ಮತ್ತು ಪಾಕ್ ಸಂಘರ್ಷದಲ್ಲಿ (India Pakistan Conflict) ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗದೇ ಇದ್ದ ಕಾರಣ, ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ ಎಂದು ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸಂಸ್ಥೆ ಜೆಫರೀಸ್ ವರದಿ (Jefferies Bank Report) ಹೇಳಿದೆ.
ದಕ್ಷಿಣ ಏಷ್ಯಾದ ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವೆ ಮಧ್ಯಪ್ರವೇಶಿಸಲು ಟ್ರಂಪ್ (Donald Trump) ಆಶಿಸಿದ್ದರು. ಆದ್ರೆ ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲ ದ್ವೇಷವನ್ನು ಕೊನೆಗೊಳಿಸುವಲ್ಲಿ ಪಾತ್ರ ವಹಿಸಲು ಅವಕಾಶ ಸಿಗಲಿಲ್ಲ. ಇದು ಅಮೆರಿಕ ಅಧ್ಯಕ್ಷರ ವೈಯಕ್ತಿಕ ದ್ವೇಷಕ್ಕೆ ಕಾರಣವಾಗಿದ್ದು, ಹೆಚ್ಚುವರಿ ಸುಂಕವನ್ನು ಭಾರತದ ಮೇಲೆ ವಿಧಿಸಿದ್ದಾರೆ ಎಂದು ವರದಿ ಹೇಳಿದೆ.
ನೊಬೆಲ್ ಶಾಂತಿ ಪ್ರಶಸ್ತಿಗೆ ಶ್ವೇತಭವನ ಒತ್ತಾಯ
ಕೆಲ ದಿನಗಳ ಹಿಂದಷ್ಟೇ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಹೇಳಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ವಿಶ್ವದಾದ್ಯಂತ ಹಲವಾರು ಯುದ್ಧಗಳನ್ನು ಕೊನೆಗೊಳಿಸಿದ್ದಾರೆ ಅವರಿಗೆ ಪ್ರಶಸ್ತಿ ನೀಡುವಂತೆ ಕೇಳಿಕೊಂಡಿತ್ತು. ಆದ್ರೆ ಭಾರತ ಮಾತ್ರ ಟ್ರಂಪ್ ಹಸ್ತಕ್ಷೇಪವನ್ನು ತಳ್ಳಿಹಾಕುತ್ತಲೇ ಬಂದಿದೆ.
ಈ ವರದಿಯ ಮತ್ತೊಂದು ಅಂಶವೆಂದರೆ, ಭಾರತ ತನ್ನ ರೈತರನ್ನು ರಕ್ಷಣೆಗಾಗಿ ನಿಂತಿರುವ ಉದ್ದೇಶವನ್ನು ಒತ್ತಿ ಹೇಳಿದೆ. ಹೌದು. ಸುಮಾರು 250 ಮಿಲಿಯನ್ ರೈತರು ಮತ್ತು ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಶೇಕಡಾ 40 ರಷ್ಟು ಉದ್ಯೋಗಿಗಳು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತ ತನ್ನ ರೈತರನ್ನು ರಕ್ಷಿಸುವ ಸಲುವಾಗಿ ಕೃಷಿ ವಲಯವನ್ನು ಆಮದುಗಳಿಗೆ ಮುಕ್ತಗೊಳಿಸಲು ಒಪ್ಪಿಕೊಂಡಿಲ್ಲ ಎಂಬುದನ್ನು ತೋರಿಸಿದೆ.