ತಮಿಳುನಾಡು ಬಿಜೆಪಿ ಮುಖ್ಯಸ್ಥೆ ಈಗ ರಾಜ್ಯಪಾಲೆ – 5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ

Public TV
1 Min Read

ನವದೆಹಲಿ: ತಮಿಳುನಾಡು ಬಿಜೆಪಿ ಮುಖ್ಯಸ್ಥೆ ಡಾ.ತಮಿಳಿಸಾಯಿ ಸೌಂದರರಾಜನ್ ಹಾಗೂ ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಸೇರಿದಂತೆ ಐದು ರಾಜ್ಯಗಳಿಗೆ ರಾಜ್ಯಪಾಲರ ಹೆಸರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಪ್ರಕಟಿಸಿದ್ದಾರೆ.

ಡಾ.ತಮಿಳಿಸಾಯಿ ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲೆಯನ್ನಾಗಿ ನೇಮಿಸಲಾಗಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡು ರಾಜ್ಯಗಳನ್ನಾಗಿ ಬೇರ್ಪಡಿಸಿದ ನಂತರ ತೆಲಂಗಾಣದ ಮೊದಲ ರಾಜ್ಯಪಾಲೆಯಾಗಿ ತಮಿಳಿಸಾಯಿ ನೇಮಕವಾಗಿದ್ದಾರೆ. ಬಂಡಾರು ದತ್ತಾತ್ರೇಯ ಅವರನ್ನು ಹಿಮಾಚಲ ಪ್ರದೇಶ ರಾಜ್ಯಪಾಲರನ್ನಾಗಿ ನೇಮಿಸಿದ್ದು, ಕಲ್ರಾಜ್ ಮಿಶ್ರಾ ಅವರ ಸ್ಥಾನಕ್ಕೆ ಇವರನ್ನು ಆಯ್ಕೆ ಮಾಡಲಾಗಿದೆ.

ಉಳಿದಂತೆ ಮಾಜಿ ಕೇಂದ್ರ ಸಚಿವ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳ ಹಾಗೂ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಕಲ್ರಾಜ್ ಮಿಶ್ರಾ ಅವರನ್ನು ರಾಜಸ್ಥಾನದಲ್ಲಿ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಅವರ ಜಾಗಕ್ಕೆ ನೇಮಿಸಲು ಕೋರಲಾಗಿದೆ.

ಇಲ್ಲಿಯವರೆಗೆ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಹಾಗೂ ಎಂ.ಕರುಣಾನಿಧಿ ಅವರ ಹಿಡಿತದಲ್ಲಿ ತಮಿಳುನಾಡು ಇತ್ತು. ಇದೀಗ ಅವರು ನಿಧನರಾದ ಬಳಿಕ ಅಸ್ತಿತ್ವ ಸ್ಥಾಪಿಸಲು ಭಾರೀ ಕಸರತ್ತು ನಡೆಸಲಾಗುತ್ತಿದೆ. ಬಿಜೆಪಿ ಸೇರಿದಂತೆ ನಟರಾದ ಕಮಲ್ ಹಸನ್, ರಜನಿಕಾಂತ್ ಅವರು ತಮ್ಮ ಬಲ ವೃದ್ಧಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ತೆಲಂಗಾಣ ರಾಜ್ಯಪಾಲರ ಹುದ್ದೆ ಇಎಸ್‍ಎಲ್ ನರಸಿಂಹನ್ ಅವರ ಉಭಯ ಉಸ್ತುವಾರಿಯಲ್ಲಿತ್ತು. ವಿಭಜನೆಗೂ ಮೊದಲು ಇವರೇ ರಾಜ್ಯಪಾಲರಾಗಿದ್ದರು.

ಹೊಸ ರಾಜ್ಯಪಾಲರನ್ನು ಪಡೆದ 5 ರಾಜ್ಯಗಳಲ್ಲಿ ಈ ವರ್ಷದ ಕೊನೆಯಲ್ಲಿ ಮಹಾರಾಷ್ಟ್ರದಲ್ಲಿ ಮಾತ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ವಿದ್ಯಾಸಾಗರ್ ರಾವ್ ಅವರ ಜಾಗಕ್ಕೆ ಇದೀಗ ಕೊಶ್ಯರಿ ಅವರು ನೇಮಕವಾಗಿದ್ದಾರೆ.

ಹಿರಿಯ ರಾಜಕಾರಣಿ ಆರಿಫ್ ಮೊಹಮ್ಮದ್ ಖಾನ್ ಕಾಂಗ್ರೆಸ್‍ನಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಬಿಜೆಪಿಗೆ ಸೇರುವ ಮುನ್ನ ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳನ್ನು ಸೇರಿದ್ದರು. ಇವರೀಗ ರಾಜ್ಯಪಾಲರಾಗಿರುವ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವುದರಿಂದ ಅವರ ಜಾಗವನ್ನು ತುಂಬಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *