5 ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ – ಮೇ 2ಕ್ಕೆ ಫಲಿತಾಂಶ

Public TV
3 Min Read

– ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಪುದುಚೇರಿಯಲ್ಲಿ ಚುನಾವಣೆ
– ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ

ನವದೆಹಲಿ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.

ಚುನಾವಣಾ ಆಯೋಗದ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ದಿನಾಂಕವನ್ನು ಪ್ರಕಟಿಸಿದ್ದು, ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.

ಕೇರಳ ಹಾಗೂ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 6ರಂದು ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಮಾರ್ಚ್ 27, ಏಪ್ರಿಲ್ 1 ರಂದು 2ನೇ ಹಂತ, ಏಪ್ರಿಲ್ 6ರಂದು 3ನೇ ಹಂತದ ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

ಕೇರಳದ 140, ತಮಿಳುನಾಡು 234, ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿವೆ. ಇತ್ತೀಚೆಗಷ್ಟೇ ವಿ.ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿದ್ದರಿಂದ ಪುದುಚೇರಿ ಕೇಂದ್ರಾಡಳಿತ ಪ್ರದೇಶದ 30 ಕ್ಷೇತ್ರಗಳಲ್ಲಿ ಸಹ ಚುನಾವಣೆ ನಡೆಯಲಿದೆ.

ಮತಗಟ್ಟೆಗಳಲ್ಲಿನ ಸಿದ್ಧತೆ, ಭದ್ರತೆ ಸೇರಿದಂತೆ ಕೊರೊನಾ ನಿಯಮಗಳ ಪಾಲನೆ ಕುರಿತು ಚುನಾವಣೆ ಆಯೋಗದ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದು, ಭಾರೀ ಬಂದೋಬಸ್ತ್ ನೊಂದಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.

ಒಟ್ಟು 824 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 18.6 ಕೋಟಿ ಮತದಾರರು ಮತದಾನ ಮಾಡುತ್ತಿದ್ದು, 2.7 ಲಕ್ಷ ಬೂತ್‍ಗಳನ್ನು ಸ್ಥಾಪಿಸಲಾಗುತ್ತದೆ. ವ್ಯಾಕ್ಸಿನೇಷನ್ ಆಗಿರುವುದರಿಂದ ಸಕಾರಾತ್ಮಕ ವಾತಾವರಣ ಉಂಟಾಗಿದೆ. ಚುನಾವಣೆ ಪ್ರಚಾರದ ವೇಳೆ ರೋಡ್ ಶೋಗಳನ್ನು ನಡೆಸಬಹುದು ಎಂದು ಚುನಾವಣಾ ಆಯೋಗ ಅನುಮತಿ ನೀಡಿದೆ. ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು ಹಾಗೂ ಅಗತ್ಯ ವಸ್ತುಗಳ ಉದ್ಯೋಗಿಗಳಿಗೆ ಮಾತ್ರ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *