ಜಾತ್ರೆಯ ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥ, ಐವರ ಸ್ಥಿತಿ ಗಂಭೀರ!

Public TV
1 Min Read

ಬೆಳಗಾವಿ: ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಭೀರೇಶ್ವರ ಮತ್ತು ಕರೆಮ್ಮ ಜಾತ್ರೆ ನಡೆದಿತ್ತು. ಈ ಜಾತ್ರೆಯಲ್ಲಿ ಗ್ರಾಮದ ಜನ ಅನ್ನ ಪ್ರಸಾದ ಮತ್ತು ಮನೆಯಲ್ಲಿ ಮಾವಿನ ಹಣ್ಣಿನ ಶಿಖರಣಿ ಸೇವಿಸಿದ್ದರು. ಆದರೆ ಪ್ರಸಾದ ಸೇವಿಸಿದವರಲ್ಲಿ ಇಂದು ಏಕಾಏಕಿ ವಾಂತಿ-ಭೇದಿ ಆರಂಭವಾಗಿದೆ. ಕೂಡಲೇ ಅಸ್ವಸ್ಥಗೊಂಡವರಿಗೆ ಸ್ಥಳೀಯ ಆಸ್ಪತ್ರೆ, ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ತೀವ್ರ ಅಸ್ವಸ್ಥಗೊಂಡ ಐವರನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದಾರೆ. ಇನ್ನು ಅಹಿತಕರ ಘಟನೆ ಆಗದಂತೆ ತಾಲೂಕಾಧಿಕಾರಿಗಳು ಗ್ರಾಮದಲ್ಲಿ ಕ್ಯಾಂಪ್ ತೆರೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈವರೆಗೂ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪಬ್ಲಿಕ್ ಟಿವಿಗೆ ಡಿಎಚ್‍ಓ ಮಾಹಿತಿ ನೀಡಿದ್ದಾರೆ.

ಪ್ರಸಾದ ಸೇವಿಸಿದವರಲ್ಲಿ ವಾಂತಿ-ಭೇದಿ ಕಂಡುಬಂದ ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗಿದೆ. ಪ್ರತಿಗಂಟೆಗೂ ರೋಗಿಗಳ ಮಾನಿಟರ್ ಮಾಡಲಾಗುತ್ತಿದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದ ಡಿಎಚ್‍ಓ ಡಾ.ಮಹೇಶ ಕೋಣಿ ತಿಳಿಸಿದ್ದಾರೆ.

Share This Article