– ಎದೆಗೆ ತೀವ್ರ ಹೊಡೆತದಿಂದ ಹೃದಯಕ್ಕೆ ಗಂಭೀರ ಹಾನಿ
ಚೆನ್ನೈ: ತಮಿಳುನಾಡಿನ ಥಿರುಪ್ಪುವನಮ್ ಪೊಲೀಸ್ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣವು (Custodial Death Case ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದೀಗ 27 ವರ್ಷದ ದೇಗುಲದ ಸೆಕ್ಯೂರಿಟಿ ಗಾರ್ಡ್ ಅಜಿತ್ ಕುಮಾರ್ ಮರಣೋತ್ತರ ಪರೀಕ್ಷಾ ವರದಿ ಬಿಡುಗಡೆಯಾಗಿದ್ದು ಆತಂಕಕಾರಿ ಸತ್ಯ ಬಹಿರಂಗಪಡಿಸಿದೆ.
ಅಜಿತ್ ಕುಮಾರ್ (Ajith Kumar) ಅವರ ಶವಪರೀಕ್ಷೆಯನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಯ (Chennai Hospital) ವೈದ್ಯಕೀಯ ತಜ್ಞರು ನಡೆಸಿದ್ದು, ವರದಿಯ ಪ್ರಕಾರ ಆತನ ದೇಹದ ಮೇಲೆ ಒಟ್ಟು 44 ಗಾಯಗಳು ಕಂಡುಬಂದಿವೆ. ತಲೆಗೆ ತೀವ್ರ ಹೊಡೆತಗಳಿಂದ ಮೆದುಳಿನ ರಕ್ತಸ್ರಾವ ಸಂಭವಿಸಿತ್ತ, ಮುಖದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದಿವೆ.
ಎದೆಗೆ ತೀವ್ರ ಹೊಡೆತದಿಂದ ಹೃದಯಕ್ಕೆ ಗಂಭೀರ ಹಾನಿಯಾಗಿತ್ತು. ಇದು ಆತನ ಮರಣಕ್ಕೆ ಪ್ರಮುಖ ಕಾರಣವಾಗಿದೆ. ದೇಹದ ಒಳಗಿನ ಅಂಗಾಂಗಗಳಿಗೆ ಗಾಯವಾಗಿದ್ದರಿಂದ ತೀವ್ರ ಆಂತರಿಕ ರಕ್ತಸ್ರಾವ ಸಂಭವಿಸಿತ್ತು. ಕೈ ಮತ್ತು ಕಾಲುಗಳ ಮೇಲೆ ಹಲವು ಗಾಯಗಳು ಮತ್ತು ಮೂಳೆ ಮುರಿತಗಳು ಕಂಡುಬಂದಿವೆ. ಶ್ವಾಸಕೋಶಕ್ಕೆ ಗಾಯವಾಗಿದ್ದರಿಂದ ಉಸಿರಾಟದ ತೊಂದರೆಯೂ ಆತನ ಮರಣಕ್ಕೆ ಕಾರಣವಾಯಿತು.
ವೈದ್ಯಕೀಯ ತಜ್ಞರ ಪ್ರಕಾರ, ಈ ಗಾಯಗಳು ಕೇವಲ ಆಕಸ್ಮಿಕವಾಗಿ ಉಂಟಾಗಿರಲು ಸಾಧ್ಯವಿಲ್ಲ. ತೀವ್ರವಾದ ದೈಹಿಕ ಹಿಂಸೆ, ಸಾಧಾರಣವಾಗಿ ಬಲವಾದ ವಸ್ತುಗಳಿಂದ ದಾಳಿಯಿಂದ ಈ ಗಾಯಗಳು ಉಂಟಾಗಿವೆ ಎಂದು ಶಂಕಿಸಲಾಗಿದೆ.
ಘಟನೆಯ ಹಿನ್ನೆಲೆ
ಅಜಿತ್ ಕುಮಾರ್ ಅವರನ್ನು ಜೂನ್ 29 ರಂದು ಚೆನ್ನೈನ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ, ಕಸ್ಟಡಿಯಲ್ಲಿದ್ದಾಗಲೇ ಆತನ ಮರಣ ಸಂಭವಿಸಿತು. ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ಆರಂಭಿಕವಾಗಿ ಯಾವುದೇ ಸ್ಪಷ್ಟ ವಿವರಣೆ ನೀಡಲಾಗಿರಲಿಲ್ಲ. ಆದರೆ, ಶವಪರೀಕ್ಷೆ ವರದಿಯ ಬಳಿಕ, ಕಸ್ಟಡಿಯಲ್ಲಿ ತೀವ್ರ ಹಿಂಸೆ ನಡೆದಿರುವ ಸಾಧ್ಯತೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ಘಟನೆಯು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕಸ್ಟಡಿ ಮರಣದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಸ್ಥಳೀಯರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಈ ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆಗೆ ಒತ್ತಾಯಿಸಿವೆ. ಈ ಪ್ರಕರಣವನ್ನು ಸಿಎಂ ಸ್ಟಾಲಿನ್ ಸಿಬಿಐಗೆ ನೀಡಿದ್ದಾರೆ.