ಪುಲ್ವಾಮಾ ದಾಳಿ ಬಳಿಕ 41 ಉಗ್ರರ ಎನ್‍ಕೌಂಟರ್: ಭಾರತೀಯ ಸೇನೆ

Public TV
1 Min Read

ಶ್ರೀನಗರ: ಪುಲ್ವಾಮಾ ದಾಳಿ ಬಳಿಕ ಇಲ್ಲಿಯವರೆಗೆ 41 ಉಗ್ರರನ್ನು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ (ಜಿಓಸಿ) ಕೆ.ಜಿ.ಎಸ್. ದಿಲ್ಲನ್ ತಿಳಿಸಿದ್ದಾರೆ.

ಸೇನೆ ಮತ್ತು ಸ್ಥಳೀಯ ಪೊಲೀಸರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಲ್ಲನ್, ಈ ವರ್ಷ ಅಂದರೆ ಜನವರಿಯಿಂದ ಇವತ್ತಿನವರೆಗೆ 69 ಉಗ್ರರನ್ನು ಹೊಡೆದುರಳಿಸಲಾಗಿದೆ. 12 ಉಗ್ರರನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸೇನೆ ಯಶಸ್ವಿಯಾಗಿದೆ. ಪುಲ್ವಾಮಾ ದಾಳಿ ಬಳಿಕ 41 ಉಗ್ರರನ್ನು ಎನ್‍ಕೌಂಟರ್ ಮಾಡಲಾಗಿದೆ. ಹತ್ಯೆಯಾದ 41 ಮಂದಿಯಲ್ಲಿ 25 ಜೈಷ್ ಉಗ್ರರು ಮತ್ತು 13 ಪಾಕಿಸ್ತಾನಿಯರು ಸೇರಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಜಮ್ಮು-ಕಾಶ್ಮೀರ ಡಿಜಿಪಿ ದಿಲ್‍ಬಾಗ್ ಸಿಂಗ್ ಮಾತನಾಡಿ, ಉಗ್ರ ಸಂಘಟನೆಯಲ್ಲಿ ಸೇರಲು ಸ್ಥಳೀಯ ಯುವಕರು ಹಿಂದೇಟು ಹಾಕುತ್ತಿದ್ದು, ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ದೇಶದ ರಕ್ಷಣೆಯ ವಿಷಯದಲ್ಲಿ ಸಂತೋಷದ ಸುದ್ದಿಯಾಗಿದೆ. 2018ರಲ್ಲಿ ಪೊಲೀಸರು 272 ಉಗ್ರರನ್ನು ಹೊಡೆದುರುಳಿಸಿದ್ದರು. ಹಾಗೆಯೇ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಸೆರೆ ಹಿಡಿಯಲಾಗಿತ್ತು ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹುಡುಕಾಟದ ಆಪರೇಷನ್ ಮುಂದುವರಿದಿದೆ. ಸೇನೆ ಮತ್ತು ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ರಾಜ್ಯದಲ್ಲಿನ ಉಗ್ರವಾದ ಅಂತ್ಯಗೊಳಿಸಲು ಶ್ರಮಿಸುತ್ತಿದೆ. ಗಡಿ ಪ್ರದೇಶದಲ್ಲಿ ಸೇನೆ ಭದ್ರತೆಯನ್ನು ಕೈಗೊಂಡಿದೆ ಎಂದು ದಿಲ್ಲನ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *