40ನೇ ವರ್ಷಕ್ಕೆ ಕಾಲಿಡ್ತಿದ್ದೇನೆ- ‘ಹ್ಯಾಪಿ ಬರ್ತ್ ಡೇ ಟು ಮೀ’ ಅಂದ್ರು ಅನುಪ್ರಭಾಕರ್

Public TV
2 Min Read

– ಪತ್ರದ ಮೂಲಕ ತನಗೆ ತಾನೇ ವಿಶ್
– ವಾಗ್ದಾನ ಮಾಡ್ಕೊಂಡ ನಟಿ

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟಿಯರಲ್ಲಿ ಒಬ್ಬರಾದ ಅನುಪ್ರಭಾಕರ್ ಮುಖರ್ಜಿ ಅವರದ್ದು ಇಂದು 40ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಟಿಗೆ ಅಭಿಮಾನಿಗಳು, ಸಂಬಂಧಿಕರು ಹಾಗೂ ನಟ-ನಟಿಯರಿಂದ ಶುಭಾಶಯಗಳ ಸುರಿಮಳೆಗಳೇ ಬರುತ್ತಿವೆ. ಈ ಮಧ್ಯೆ ಅನು ಅವರು ವಿಶೇಷವಾಗಿ ತಮಗೆ ತಾವೇ ವಿಶ್ ಕೂಡ ಮಾಡಿಕೊಂಡಿದ್ದಾರೆ.

ಇವತ್ತು ನಾನು 40ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂಬ ತಲೆಬರಹದೊಂದಿಗೆ ಪತ್ರದ ಮೂಲಕ ಶುಭಾಶಯ ಕೋರಿಕೊಂಡ ಅನು, ಕೃತಜ್ಞತೆ! ಎಂಬ ಒಂದು ಪದವು ಇಂದು ನನ್ನ ಹೃದಯವನ್ನು ತುಂಬುತ್ತದೆ. ನನಗೆ ಈ ಅದ್ಭುತವಾದ ಜೀವನ, ತಂದೆ-ತಾಯಿಗಳು, ಕುಟುಂಬ ಮತ್ತು ಕುಟುಂಬದಂತಿರುವ ಸ್ನೇಹಿತರನ್ನು ನೀಡಿರುವ ದೇವರು ಮತ್ತು ಈ ಪ್ರಪಂಚಕ್ಕೆ ಋಣಿಯಾಗಿದ್ದೇನೆ ಹಾಗೂ ವಂದನೆಗಳನ್ನು ಸಲ್ಲಿಸುತ್ತೇನೆ.

ಗಾಯತ್ರಿ ಮತ್ತು ಪ್ರಭಾಕರ್ ಮಗಳಾಗಿ, ವಿಕ್ಕಿಯ ತಂಗಿಯಾಗಿ, ಅನ್ನಪೂರ್ಣಳಾಗಿ ನನ್ನ ಬಾಲ್ಯ ಕಳೆದೆ. ಆನಂತರ ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ಅನುಪ್ರಭಾಕರ್ ಆಗಿ ನೆಲೆಸಿದೆ. ರಘು ಅವರ ಜೀವನ ಸಂಗಾತಿಯಾಗಿ, ನಂದನಾಳ ಅಮ್ಮನಾಗುವ ಮೂಲಕ ನನ್ನ ಸುಂದರವಾದ ಜೀವನ ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು.

ಈ 40 ವರ್ಷಗಳು ಸ್ಮರಣಯೋಗ್ಯ ಜೀವನವಾಗುವಂತೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ. ಕೃತಜ್ಞತೆ ತುಂಬಿದ ಜೀವನವನ್ನು ನಡೆಸುವಲ್ಲಿ ನನ್ನ ತಂದೆ-ತಾಯಿಗಳು ನನ್ನಲ್ಲಿ ಅಂತರ್ಗತ ಮಾಡಿರುವ ಮೂಲ ತತ್ವಗಳಂತೆ ಜೀವನವನ್ನು ಸಾಗಿಸುತ್ತೇನೆಂದು ನನಗೆ ನಾನೇ ವಾಗ್ದಾನ ಮಾಡಿಕೊಳ್ಳುತ್ತೇನೆ.

ಅಪ್ಪ-ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ, ಆದರೆ ನನಗೆ ಗೊತ್ತು ಪ್ರತಿಕ್ಷಣ ನೀವು ನನ್ನ ಪಕ್ಕದಲ್ಲಿದ್ದು, ನನ್ನ ಕೈಹಿಡಿದು ಆಶೀರ್ವಾದ ಮಾಡಿ ನನ್ನನ್ನು ನಡೆಸುತ್ತೀರಿ ಎಂದು! ಹ್ಯಾಪಿ ಬರ್ತ್ ಡೇ ಟು ಮೀ..!! ಎಂದು ಅನು ಬರೆದುಕೊಂಡಿದ್ದಾರೆ.

ಅನುಪ್ರಭಾಕರ್ ಅವರು ಸದಾ ಸಾಮಾಜಿಕ ಜಾಲತಾಣಗಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಮಗಳ ತುಂಟಾಟದ ವೀಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಟ್ವೀಟ್ ಮಾಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ನಟಿಸುವುದಾಗಿ ತಿಳಿಸಿದ್ದ ಅನು, ನನ್ನ ಪಾಲಿನ ದೇವರುಗಳಾದ ನಿಮ್ಮ ತಂದೆ-ತಾಯಿ, ನನ್ನನ್ನು ಕನ್ನಡಿಗರಿಗೆ, ನಿಮ್ಮ ಅಣ್ಣ ಶಿವರಾಜ್ ಕುಮಾರ್ ಅವರ ಜೋಡಿಯಾಗಿ ಪರಿಚಯಿಸಿದರು. 21 ವರ್ಷಗಳ ನಂತರ ಈಗ ನಿಮ್ಮ ಜೊತೆ ಅಭಿನಯಿಸುವ ಅವಕಾಶ ದೊರೆತಿದೆ ಎಂದು ಬರೆದುಕೊಂಡು ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದರು. ಅಲ್ಲದೆ ನಾನು ರೋಮಾಂಚನಗೊಂಡಿದ್ದು, ಎದುರು ನೋಡುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *