ಮಲತಾಯಿ ಕ್ರೌರ್ಯಕ್ಕೆ ಬಲಿಯಾಯ್ತಾ 4 ವರ್ಷದ ಕಂದಮ್ಮ?

Public TV
1 Min Read

ಬೆಳಗಾವಿ: ನಾಲ್ಕು ವರ್ಷದ ಮಗಳನ್ನ ಮಲತಾಯಿಯೇ ಕೊಲೆ ಮಾಡಿರುವ ಆರೋಪ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಂಗ್ರಾಳಿ ಕೆಎಚ್ ಗ್ರಾಮದಲ್ಲಿ ನಡೆದಿದೆ.

ಸಮೃದ್ಧಿ ರಾಯಣ್ಣ ನಾವಿ(4) ಮೃತ ಬಾಲಕಿ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ಸಾವನ್ನಪ್ಪಿದೆ. ಹುಷಾರಿಲ್ಲವೆಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬರುವಾಗಲೇ ದಾರಿ ಮಧ್ಯೆ ಮಗು ಕೊನೆಯುಸಿರೆಳೆದಿದೆ. ಮಗು ಸಾವಿನ ಸುದ್ದಿ ತಿಳಿದು ಆಸ್ಪತ್ರೆಗೆ ಅಜ್ಜ, ಅಜ್ಜಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಮಗುವಿನ ಸಾವಿಗೆ ಮಲತಾಯಿ ಸಪ್ನಾ ರಾಯಣ್ಣ ನಾವಿ ಕಾರಣ. 2021ರಲ್ಲಿ ವರದಕ್ಷಿಣೆ ಕಿರುಕುಳ ಕೊಟ್ಟು ತಾಯಿ ಭಾರತಿ ನಾವಿ ಕೊಲೆ ಮಾಡಲಾಗಿತ್ತು. ಈಗ ಮಲತಾಯಿ ಸಪ್ನಾಳೇ 4 ವರ್ಷದ ಮೊಮ್ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಬಾಲಕಿ‌ ಅಜ್ಜ ಸುನೀಲ ಹಂಪನ್ನವರ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್‌ ದುರಂತಕ್ಕೀಡಾದವರ ಮೃತದೇಹ ಸಾಗಿಸ್ತಿರೋ ಮೊದಲ ದೃಶ್ಯ ಬಿಡುಗಡೆ

ಮೃತ ಬಾಲಕಿ ತಂದೆ ರಾಯಣ್ಣ ನಾವಿ ಛತ್ತೀಸ್‌ಗಢದಲ್ಲಿ ಸಿಆರ್ ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಮಗುವಿನ ತಂದೆ ಬರೋವರೆಗೂ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article