ಸೊಳ್ಳೆ ಕಾಯಿಲ್ ಕಿಡಿಯಿಂದ ಹೊತ್ತಿ ಉರಿದ ಮನೆ- ನಿದ್ರೆಯಲ್ಲಿದ್ದ ಕುಟುಂಬದ ನಾಲ್ವರು ಚಿರನಿದ್ರೆಗೆ!

Public TV
1 Min Read

ನವದೆಹಲಿ: ನಗರದ ಸೀಮಾಪುರಿ ಪ್ರದೇಶದಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾರುಣ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಈ ದುರ್ಘಟನೆ ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗೆ ಬೆಂಕಿ ಬಿದ್ದ ವಿಚಾರವನ್ನು ಮುಂಜಾನೆ 4.07ರ ಸಮಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಮೂರು ಅಂತಸ್ತಿನ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿಗೆ ಸುಟ್ಟು ಕರಕಲಾಗಿದ್ದ ನಾಲ್ಕು ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ನಾಲ್ವರೂ ಒಂದೇ ಕುಟುಂಬದವರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಹರಿಲಾಲ್ (58), ಅವರ ಪತ್ನಿ ರೀನಾ (55), ಪುತ್ರ ಆಶು (24) ಹಾಗೂ ಪುತ್ರಿ ರೋಹಿಣಿ (18) ಎಂದು ಗುರುತಿಸಲಾಗಿದೆ. ಹರಿಲಾಲ್ ಮತ್ತು ರೀನಾ ದಂಪತಿ ಮತ್ತೊಬ್ಬ ಪುತ್ರ ಅಕ್ಷಯ್ (22) ಅಪಾಯದಿಂದ ಪಾರಾಗಿದ್ದಾನೆ. ಈತ ಕಟ್ಟಡದ ಎರಡನೇ ಅಂತಸ್ತಿನ ಮನೆಯಲ್ಲಿ ಮಲಗಿದ್ದ. ಆದರೆ ಮೂರನೇ ಅಂತಸ್ತಿನ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ನಿದ್ರಿಸುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಶಾಸ್ತ್ರಿ ಭವನದಲ್ಲಿ ಉದ್ಯೋಗಿಯಾಗಿದ್ದ ಹರಿಲಾಲ್ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿದ್ದರು. ಅವರ ಪತ್ನಿ ದೆಹಲಿಯ ನಗರಪಾಲಿಕೆಯಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪುತ್ರ ಆಶು ಅವರು ಕೆಲಸ ಹುಡುಕಾಟದಲ್ಲಿದ್ದರು. ಪುತ್ರಿ ರೋಹಿಣಿ ಅವರು ಸೀಮಾಪುರಿಯ ಸರ್ಕಾರಿ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದರು. ಇನ್ನು ಅಕ್ಷಯ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ.

ಸೊಳ್ಳೆ ಕಾಯಿಲ್‍ನ ಕಿಡಿ ತಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *