ಬಂಡೆ ಸ್ಫೋಟದಿಂದ 4 ಚಿರತೆ ಸಾವು, ಸ್ಥಳೀಯರಿಗೂ ತೊಂದರೆ, ಕ್ರಮ ವಹಿಸದಿದ್ದರೆ ಹೋರಾಟ – ಎಸ್.ಟಿ ಸೋಮಶೇಖರ್ ಎಚ್ಚರಿಕೆ

1 Min Read

– ಅಕ್ರಮ ಕ್ರಷರ್ ವಿರುದ್ಧ ಸಿಡಿದೆದ್ದ ಶಾಸಕ‌

ಬೆಂಗಳೂರು: ತಮ್ಮ ಕ್ಷೇತ್ರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಯಶವಂತಪುರ (Yeswanthpur) ಶಾಸಕ ಎಸ್.ಟಿ ಸೋಮಶೇಖರ್ (S.T Somashekar ) ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಕೆಂಗೇರಿ ಹೋಬಳಿಯ ಚಿಕ್ಕನಹಳ್ಳಿ ಸೇರಿ ಸುತ್ತಲಿನ ಗ್ರಾಮಗಳ ಹಲವು ಸರ್ವೆ ನಂಬರ್‌ಗಳಲ್ಲಿ ಅಕ್ರಮವಾಗಿ ಕಲ್ಲುಗಳ ಕ್ರಷರ್ ನಡೀತಿದ್ದು, ಬಂಡೆಗಳನ್ನು ಒಡೆಯಲು ಸಿಡಿಮದ್ದುಗಳ ಬಳಕೆ ಮಾಡ್ತಿದ್ದಾರೆ. ಇದರಿಂದ ಸುತ್ತಲಿನ ಗ್ರಾಮಸ್ಥರಿಗೆ ತೊಂದರೆ ಆಗಿದೆ.‌ ರಸ್ತೆಗಳು ಹಾಳಾಗಿವೆ. ವನ್ಯಜೀವಿಗಳು, ಪಕ್ಷಿಗಳು ಸಾಯ್ತಿವೆ. ಗರ್ಭಿಣಿ ಚಿರತೆ (Leopards) ಸೇರಿ ನಾಲ್ಕು ಚಿರತೆಗಳು ಸತ್ತಿವೆ. ಕಲ್ಲು ಕ್ರಷರ್ ವಿರುದ್ಧ ಅರಣ್ಯ ಹಾಗೂ ಗಣಿಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ರೂ ಪ್ರಯೋಜನ ಆಗಿಲ್ಲ. ಸಚಿವರು ಫೋನ್ ರಿಸೀವ್ ಮಾಡ್ತಿಲ್ಲ. ಸರ್ಕಾರ ಕ್ರಮ ವಹಿಸದಿದ್ರೆ ಹೋರಾಟ ಮಾಡ್ತೇನೆ ಅಂತ ಎಚ್ಚರಿಸಿದ್ರು. ಈ ಸಂಬಂಧ ಅರಣ್ಯ ಸಚಿವರಿಗೆ ಪತ್ರವನ್ನೂ ಬರೆದಿರುವುದಾಗಿ ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಸಹ ಪ್ರತಿಕ್ರಿಯೆ ಕೊಟ್ಟಿದ್ದು, ಕ್ವಾರಿ, ಅರಣ್ಯದ ಒಳಗಡೆ ಬರುವುದಿಲ್ಲ. ಅರಣ್ಯದ ಹೊರಗೆ ಬರುತ್ತೆ ಅಂತ ನಮ್ಮ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಬ್ಲಾಸ್ಟ್ ಮಾಡಿದ ಕಾರಣಕ್ಕಾಗಿ ಒಂದು ಚಿರತೆ ಸತ್ತಿದೆ. ಚಿರತೆ ಪೋಸ್ಟ್ ಮಾರ್ಟಂ ಮಾಡಿದಾಗ ಹೊಟ್ಟೆಯಲ್ಲಿ ಮರಿ ಇತ್ತು ಅಂತ ಗೊತ್ತಾಗಿದೆ.‌ ಇದನ್ನ ಅತ್ಯಂತ ಗಂಭೀರವಾಗಿ ನಮ್ಮ ಇಲಾಖೆ ಪರಿಗಣಿಸುತ್ತೆ. ಯಾರು ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅವರ ವಿರುದ್ಧ ಅತ್ಯಂತ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಎಸ್‌ಟಿ ಸೋಮಶೇಖರ್ ಅವರ ಜೊತೆಗೂ ಕೂಡ ಮಾತನಾಡುತ್ತೇನೆ. ಕಲ್ಲು ಗಣಿಗಾರಿಕೆಗಳು ಮಾರ್ಗಸೂಚಿ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಯಾರೇ ಇರಲಿ ಎಷ್ಟೇ ಒತ್ತಡ ಬರಲಿ ಹಿಂದೆನೂ ನಾವು ಬಿಟ್ಟಿಲ್ಲ ಮುಂದೇನು ಬಿಡಲ್ಲ. ಪಾರದರ್ಶಕವಾದ ತನಿಖೆ ನಡೆಯುತ್ತದೆ ಎಂದು ಭರವಸೆ ಕೊಟ್ಟಿದ್ದಾರೆ.

Share This Article