ಪ್ರಧಾನಿ ಮೋದಿ ನೇತೃತ್ವದಲ್ಲಿಂದು 4 ಹೈವೋಲ್ಟೇಜ್ ಸರಣಿ ಸಭೆ – ಪಾಕ್ ಬಗ್ಗುಬಡಿಯೋಕೆ ಮಾಸ್ಟರ್ ಪ್ಲ್ಯಾನ್‌!

Public TV
2 Min Read

ನವದೆಹಲಿ: ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯ ಹಿನ್ನೆಲೆ ಪಾಕಿಸ್ತಾನವನ್ನು ಬಗ್ಗುಬಡಿಯಲು ಭಾರತ ತಯಾರಿ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಇಂದು (ಏ.30) ನಾಲ್ಕು ಹೈವೋಲ್ಟೇಜ್ ಸಭೆಗಳು ನಡೆಯಲಿವೆ.

ಇಡೀ ದಿನ ಭದ್ರತಾ ಸಂಪುಟ ಸಮಿತಿ ಸಭೆ, ರಾಜಕೀಯ ವ್ಯವಹಾರಗಳ ಸಮಿತಿ ಸಭೆ, ಆರ್ಥಿಕ ವ್ಯವಹಾರಗಳ ಸಮಿತಿ ಸಭೆ ಹಾಗೂ ಸಚಿವ ಸಂಪುಟ ಸಭೆಗಳು ನಡೆಯಲಿದ್ದು, ಸರಣಿ ಹೈವೋಲ್ಟೇಜ್ ಮೀಟಿಂಗ್‌ಗಳಲ್ಲಿ ಪಾಕಿಸ್ತಾನವನ್ನು ಸದೆಬಡಿಯುವ ಕುರಿತು ಸರ್ಕಾರ ನಿರ್ಣಾಯಕ ನಡೆ ಇಡುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಜೊತೆಗೆ ಮೋದಿ ಯಾರೂ ಊಹಿಸದ ಸೇನಾ ಕಾರ್ಯಾಚರಣೆಗೆ ಒಪ್ಪಿಗೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಉಗ್ರರ ವಿರುದ್ಧ ಪ್ರತೀಕಾರಕ್ಕೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಮೋದಿ

ಮೋದಿಯವರ ನೇತೃತ್ವದಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೂ ಮಹತ್ವದ ಸಭೆಗಳು ನಿಗದಿಯಾಗಿವೆ. 11 ಗಂಟೆಗೆ ಭದ್ರತಾ ಸಂಪುಟ ಸಮಿತಿ ಸಭೆ, ನಂತರ ರಾಜಕೀಯ ವ್ಯವಹಾರಗಳ ಸಮಿತಿ ಸಭೆ, ಆರ್ಥಿಕ ವ್ಯವಹಾರಗಳ ಸಮಿತಿ ಸಭೆ ಹಾಗೂ ಕೊನೆಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಸಲಾಗುವುದು. ಈ ಪೈಕಿ ಭದ್ರತಾ ಸಂಪುಟ ಸಮಿತಿ ಸಭೆ ನಿರ್ಣಾಯಕವಾಗಲಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಉಗ್ರರ ದಾಳಿಯಾದ ಎರಡೇ ದಿನಗಳಲ್ಲಿ ನಡೆದ ಸಮಿತಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಮೋದಿ ಶಾಕ್ ಕೊಟ್ಟಿದ್ದರು. ಸಿಂಧೂ ಜಲ ಒಪ್ಪಂದ, ಭಾರತದಿಂದ ತೊಲಗಲು ಪಾಕ್ ಪ್ರಜೆಗಳಿಗೆ ಸೂಚನೆ, ಅಟ್ಟಾರಿ-ವಾಘಾ ಗಡಿ ಬಂದ್‌ನಂತಹ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದರು. ಇಂದಿನ ಸಭೆಯಲ್ಲಿ ಪ್ರಧಾನಿ ಮೋದಿ ದೇಶದ ಭದ್ರತೆ ಕುರಿತು ಮತ್ತೊಮ್ಮೆ ಮಾಹಿತಿ ಪಡೆಯಲಿದ್ದು, ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಪಹಲ್ಗಾಮ್ ದಾಳಿಯ ಬಳಿಕ ನಡೆಯುತ್ತಿರುವ 2ನೇ ಭದ್ರತಾ ಸಂಪುಟ ಸಮಿತಿ ಸಭೆ ಇದಾಗಿದ್ದು, ಈ ಸಲ ಯಾರೂ ಊಹಿಸದ ತೀರ್ಮಾನಗಳ ಮೂಲಕ ಪಾಕ್‌ಗೆ ಬಿಗ್ ಕೌಂಟರ್ ಕೊಡುವ ನಿರೀಕ್ಷೆಯಿದೆ. ಉಗ್ರರಿಗೆ, ಉಗ್ರಪೋಷಕ ಪಾಕ್‌ಗೆ ತಕ್ಕ ಪ್ರತ್ಯುತ್ತರ ನೀಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಮೊದಲಿನ ಮೂರು ಸಭೆಗಳಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಆರೋಗ್ಯ ಸಚಿವ ಜೆ.ಪಿ ನಡ್ಡಾ, ಸಿಡಿಎಸ್ ಅನಿಲ್ ಚೌಹಾಣ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತಿತರರು ಭಾಗಿಯಾಗಲಿದ್ದಾರೆ.

ಕೊನೆಯದಾಗಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಹತ್ತು ಪ್ರಮುಖ ಹಿರಿಯ ಸಚಿವರು ಭಾಗಿಯಾಗಲಿದ್ದು, ಈ ಸಭೆಯಲ್ಲಿ ಪಾಕಿಸ್ತಾನ ವಿರುದ್ಧ ರಹಸ್ಯ ಸೇನಾ ಕಾರ್ಯಾಚರಣೆ ಬಗ್ಗೆ ಮಹತ್ವದ ಚರ್ಚೆಯಾಗುವ ಸಾಧ್ಯತೆಯಿದೆ. ಸದ್ಯ ಇಂದಿನ ನಾಲ್ಕು ಹೈವೋಲ್ಟೇಜ್ ಸರಣಿ ಸಭೆಗಳಿಂದ ಭಾರೀ ಕುತೂಹಲ ಸೃಷ್ಟಿಯಾಗಿದೆ. ಪಾಕ್ ವಿರುದ್ಧ ಇಡೀ ಜಗತ್ತೇ ತಿರುಗಿ ನೋಡುವಂತಹ ಪ್ರತೀಕಾರದ ಹೆಜ್ಜೆ ಭಾರತ ಇಂದೇ ಇಡಲಿದೆಯಾ ಎಂದು ಕಾದುನೋಡಬೇಕಾಗಿದೆ.ಇದನ್ನೂ ಓದಿ: ಭಾರತದಿಂದ ಪಾಕ್‌ಗೆ ಮೆಡಿಸಿನ್ ಬಂದ್ – ಔಷಧವಿಲ್ಲದೆ ಕೆಲಸ ತೊರೆಯಲು ಮುಂದಾಗ್ತಿರೋ ವೈದ್ಯರು!

Share This Article