ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತ – ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವು

Public TV
1 Min Read

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತದಿಂದ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಗಾಯಗೊಂಡಿದ್ದ ಕಾರ್ಮಿಕರು ಜೋಶಿಮಠದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿಮದಡಿ ಒಟ್ಟು 55 ಕಾರ್ಮಿಕರು ಸಿಲುಕಿದ್ದರು. ಇದುವರೆಗೆ 50 ಜನರನ್ನು ರಕ್ಷಣೆ ಮಾಡಿದ್ದು, ಬಾಕಿ ಐದು ಜನರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.

ಘಟನಾ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲು ಆರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಸ್ಥಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಭಾರತ-ಟಿಬೆಟ್ ಗಡಿಯ ಸಮೀಪವಿರುವ ಮಾನಾ ಗ್ರಾಮ ಪ್ರದೇಶದಲ್ಲಿ ರಾತ್ರಿಯಿಡೀ ಸುಮಾರು ಏಳು ಅಡಿ ವರೆಗೂ ಇದ್ದ ಹಿಮವನ್ನು 65 ಕ್ಕೂ ಹೆಚ್ಚು ಸಿಬ್ಬಂದಿ ತೆರವುಗೊಳಿಸಿದ್ದಾರೆ. ಚಮೋಲಿ ಜಿಲ್ಲೆಯಲ್ಲಿ ರಾಜ್ಯದ ಹವಾಮಾನ ಇಲಾಖೆ ಮಳೆ ಮತ್ತು ಹಿಮಪಾತದ ಎಚ್ಚರಿಕೆ ನೀಡಿದೆ. ಡೆಹ್ರಾಡೂನ್, ಉತ್ತರಕಾಶಿ, ರುದ್ರಪ್ರಯಾಗ, ತೆಹ್ರಿ, ಪೌರಿ, ಪಿಥೋರಗಢ, ಬಾಗೇಶ್ವರ, ಅಲ್ಮೋರಾ, ನೈನಿತಾಲ್ ಮತ್ತು ಚಂಪಾವತ್‌ಗಳಲ್ಲಿಯೂ ಸಹ ಲಘು ಮಳೆಯಾಗುವ ಸಾಧ್ಯತೆಗಳಿವೆ.

Share This Article