ಕೊರೆವ ಚಳಿ, ದಟ್ಟ ಮಂಜು – ರಸ್ತೆ ಕಾಣದೇ ಸರಣಿ ಅಪಘಾತ; ನಾಲ್ವರು ದುರ್ಮರಣ

2 Min Read

– ಕನಿಷ್ಠ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

ಚಂಡೀಗಢ: ಉತ್ತರ ಭಾರತದ (North India) ಕೆಲವು ಭಾಗಗಳಲ್ಲಿ ಶೀತ ವಾತಾವರಣ ತೀವ್ರಗೊಂಡಿದೆ. ದಟ್ಟಮಂಜಿನಿಂದ ರಸ್ತೆಗಳೇ ಕಾಣದಂತೆ ಮುಚ್ಚಿಹೋಗಿವೆ. ಈ ಮಧ್ಯೆ ಕಡಿಮೆ ಗೋಚರತೆಯಿಂದಾಗಿ ಸಂಭವಿಸಿದ ಸರಣಿ ಅಪಘಾತಗಳಲ್ಲಿ (Vehicle Collisions) ನಾಲ್ವರು ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ.

ಪಂಜಾಬ್ ಮತ್ತು ನೆರೆಯ ಹರಿಯಾಣ (Haryana) ಪ್ರದೇಶಗಳಲ್ಲಂತೂ ಅಕ್ಕಪಕ್ಕದಲ್ಲಿರುವವರೂ ಕಾಣದಷ್ಟು ಮಂಜು ಆವರಿಸುತ್ತಿದೆ. ಭಾನುವಾರ (ಇಂದು), ಸೋಮವಾರ (ನಾಳೆ) ಉತ್ತರ ಭಾರತದಲ್ಲಿ ಶೀತಗಾಳಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1.1 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ತಾಪಮಾನ
ಕಳೆದ ಕೆಲ ದಿನಗಳಿಂದ ಕಾಶ್ಮೀರ ಕಣಿವೆ (Kashmir Valley) ಪ್ರದೇಶದಲ್ಲಿ ಶೂನ್ಯಕ್ಕಿಂತಲೂ ಕಡಿಮೆ ತಾಪಮಾನ ದಾಖಲಾಗಿದ್ದು, ಇದರ ಪರಿಣಾಮ ರಾಜಧಾನಿ ದೆಹಲಿಯಲ್ಲಿ ಶೀತ ಹೆಚ್ಚಾಗಿದೆ. ಜೊತೆಗೆ ಪಂಜಾಬ್‌ನ ಹಲವು ಭಾಗಗಳಲ್ಲಿ ಮೈಕೊರೆವ ಚಳಿ ಆವರಿಸಿದೆ. ಹೋಶಿಯಾರ್‌ಪುರದಲ್ಲಿ ಕನಿಷ್ಠ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲಿ ಅಪಘಾತ?
ಹೋಶಿಯಾರ್‌ಪುರ – ದಾಸುಯಾ ರಸ್ತೆಯಲ್ಲಿ ಕಾರು ಮತ್ತು ಬಸ್ ನಡುವೆ ಡಿಕ್ಕಿಯಾಗಿ ನಾಲ್ವರು ಪುರುಷರು ಸಾವನ್ನಪ್ಪಿದ್ದಾರೆ, ಓರ್ವ ವ್ಯಕ್ತಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಮಂಜಿನಿಂದ ಕಡಿಮೆ ಗೋಚರತೆಯಿಂದಾಗಿ ಅಪಘಾತ ಸಂಭವಿಸಿರೋದಾಗಿ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಅಪಘಾತ ರಾಜಸ್ಥಾನದಲ್ಲಿ ಸಂಭವಿಸಿದೆ. ಜೈಪುರ-ದೆಹಲಿ NH-48 ರಲ್ಲಿ ಬಸ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಸಲ್ಮೇರ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಬಸ್ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸ್ಟೇಷನ್ ಹೌಸ್ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಎಲ್ಲೆಲ್ಲಿ ಕನಿಷ್ಠ ತಾಪಮಾನ ದಾಖಲು?
ಇನ್ನೂ ಅಮೃತಸರದಲ್ಲಿ ಕನಿಷ್ಠ ತಾಪಮಾನ 1.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರೆ, ಬಟಿಂಡಾದಲ್ಲಿ 3.4 ಡಿಗ್ರಿ ಸೆಲ್ಸಿಯಸ್, ಫರೀದ್‌ಕೋಟ್‌ನಲ್ಲಿ 3.2 ಡಿಗ್ರಿ ಸೆಲ್ಸಿಯಸ್, ಪಟಿಯಾಲದಲ್ಲಿ 4.4 ಡಿಗ್ರಿ ಸೆಲ್ಸಿಯಸ್ ಮತ್ತು ಗುರುದಾಸ್ಪುರದಲ್ಲಿ 3.2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಪಂಜಾಬ್‌ & ಹರಿಯಾಣ ರಾಜಧಾನಿಯಾದ ಚಂಡೀಗಢದಲ್ಲಿಯೂ ಸಹ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಸಿದೆ.

ಹರಿಯಾಣದ ನರ್ನೌಲ್‌ನಲ್ಲಿ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ರೆ, ಹಿಸಾರ್‌ನಲ್ಲಿ 4 ಡಿಗ್ರಿ ಸೆಲ್ಸಿಯಸ್, ಕರ್ನಾಲ್‌ನಲ್ಲಿ 4.4 ಡಿಗ್ರಿ ಸೆಲ್ಸಿಯಸ್, ಭಿವಾನಿಯಲ್ಲಿ 4.5 ಡಿಗ್ರಿ ಸೆಲ್ಸಿಯಸ್, ರೋಹ್ಟಕ್‌ನಲ್ಲಿ 5 ಡಿಗ್ರಿ ಸೆಲ್ಸಿಯಸ್ ಮತ್ತು ಅಂಬಾಲಾದಲ್ಲಿ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Share This Article