ಕೊಡಗಿನಲ್ಲಿ ಗಾಳಿ, ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ – ಚೆಸ್ಕಾಂಗೆ ಕೋಟಿ ಕೋಟಿ ನಷ್ಟ

Public TV
2 Min Read

ಕೊಡಗು: ಜಿಲ್ಲೆಯಲ್ಲಿ ಸಾಕಷ್ಟು ಗಾಳಿ, ಮಳೆ ಸುರಿಯುವುದರಿಂದ ಭಾರಿ ನಷ್ಟ ಅನುಭವಿಸುವುದು ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಹಿಂದೆಂದಿಗಿಂತ ಈ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಚೆಸ್ಕಾಂಗೆ ನಷ್ಟ ಉಂಟಾಗಿದೆ.

ಕಳೆದ ಜುಲೈ, ಅಗಸ್ಟ್ ತಿಂಗಳಲ್ಲಿ ಬಿಟ್ಟು ಬಿಡದೆ ಸುರಿದಿದ್ದ ಭಾರೀ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಪ್ರವಾಹದ ರೂಪ ಪಡೆದಿತ್ತು. ಅದಕ್ಕಿಂತ ಮುಖ್ಯವಾಗಿ ಮಳೆಯ ಜೊತೆಗೆ ಬೀಸಿದ್ದ ಭೀಕರ ಗಾಳಿ ಸಾವಿರಾರು ಮರ, ವಿದ್ಯುತ್ ಕಂಬಗಳು ಧರಾಶಾಯಿ ಮಾಡಿತ್ತು. ಮರಗಳು ವಿದ್ಯುತ್ ಲೈನ್‌ಗಳ ಮೇಲೆ ಉರುಳಿ ಬಿದ್ದ ಪರಿಣಾಮ, 3,077 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ಜೊತೆಗೆ 150 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ ಎಂದು ಸ್ವತಃ ಚೆಸ್ಕಾಂ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇದರಿಂದ ಇಲಾಖೆಗೆ 4.83 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೊಡಗು ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಮಾಹಿತಿ ನೀಡಿದ್ದಾರೆ.

ಜಿಲ್ಲೆ, ಸೆಪ್ಟೆಂಬರ್ ತಿಂಗಳಲ್ಲಿಯೂ ಮಳೆ ಆರ್ಭಟ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತೆ ಜಿಲ್ಲಾಮಟ್ಟದ ಅಧಿಕಾರಿಗಳು ಅಲಟ್9 ಇರುವಂತೆಯೂ ಸೂಚನೆ ನೀಡಿದ್ದಾರೆ. ಅಲ್ಲದೇ ಚೆಸ್ಕಾಂ ಇಲಾಖೆಯ ನಷ್ಟದ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೆಂಕಟರಾಜ, ವಿದ್ಯುತ್ ಇಲಾಖೆಯಿಂದ ಈಗಾಗಲೇ ನಷ್ಟ ಉಂಟಾಗಿರುವ ಕುರಿತು ವರದಿಯನ್ನು ಸಲ್ಲಿಸಿದ್ದಾರೆ. ಅದರ ಬಗ್ಗೆ ಅವರಿಗೆ ಮಾರ್ಗಸೂಚಿ ಪ್ರಕಾರ ಇಲಾಖೆಗೆ ಪರಿಹಾರದ ಹಣವನ್ನು ಕೊಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಇಷ್ಟು ನಷ್ಟ ಉಂಟಾಗಿದ್ದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಅಡಚಣೆ ಆಗದಂತೆ ಉತ್ತಮ ರೀತಿಯಲ್ಲಿ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಗಳಲ್ಲಿ ಈಗಾಗಲೇ ವಿದ್ಯುತ್ ಸರಬರಾಜು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಕೆಲವು ಎರಡು-ಮೂರು ವರ್ಷಗಳಲ್ಲಿ ನೋಡಿದರೆ, ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದ ಸಂಖ್ಯೆ ಕಡಿಮೆ. ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಉರುಳಿ ಬಿದ್ದರೂ ವಿದ್ಯುತ್ ಲೈನ್ ತುಂಡಾಗುತ್ತಿದ್ದವೇ ಹೊರತ್ತು, ಕಂಬಗಳು ಮುರಿದು ಬೀಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅಳವಡಿಸುತ್ತಿರುವ ವಿದ್ಯುತ್ ಕಂಬಗಳು ಸಣ್ಣ ಗಾಳಿ ಮಳೆಗೂ ಮುರಿದು ಬೀಳುತ್ತಿವೆ. ಲೈನ್‌ಗಳ ಮೇಲೆ ಮರದ ಸಣ್ಣ ಕೊಂಬೆಗಳು ಮುರಿದು ಬಿದ್ದರೂ ವಿದ್ಯುತ್ ಕಂಬಗಳೇ ಮುರಿದು ಬೀಳುತ್ತಿವೆ. ಇದು ಸಾರ್ವಜನಿಕ ಅನುಮಾನಕ್ಕೆ ಕಾರಣವಾಗಿದೆ.

Share This Article