ವಿಶ್ವದಾಖಲೆ, ಧೋನಿ ದಾಖಲೆ ಬ್ರೇಕ್, ಸರಣಿ ಶ್ರೇಷ್ಠ ಗೌರವ – ಪಂದ್ಯ ಒಂದು, ಕೊಹ್ಲಿ ದಾಖಲೆ ಹಲವು

Public TV
1 Min Read

ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಮಾಜಿ ನಾಯಕ ಧೋನಿ ದಾಖಲೆಯನ್ನು ಹಿಂದಿಕ್ಕುವುದರ ಜೊತೆಗೆ ನಾಯಕನಾಗಿ ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ 5 ಸಾವಿರ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

ಏಕದಿನ ಪಂದ್ಯದಲ್ಲಿ ನಾಯಕನಾಗಿ ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ 5 ಸಾವಿರ ರನ್ ಹೊಡೆಯುವ ಮೂಲಕ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕೊಹ್ಲಿ 86 ಪಂದ್ಯಗಳ 82 ಇನ್ನಿಂಗ್ಸ್ ನಲ್ಲಿ 5 ಸಾವಿರ ರನ್ ಹೊಡೆದಿದ್ದಾರೆ. ಈ ಹಿಂದೆ ಅನುಕ್ರಮವಾಗಿ ಧೋನಿ(145 ಪಂದ್ಯ, 127 ಇನ್ನಿಂಗ್ಸ್), ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್(137 ಪಂದ್ಯ, 131 ಇನ್ನಿಂಗ್ಸ್), ಮೊಹಮ್ಮದ್ ಅಜರುದ್ದೀನ್(137 ಪಂದ್ಯ, 135 ಇನ್ನಿಂಗ್ಸ್), ಸೌರವ್ ಗಂಗೂಲಿ(140 ಪಂದ್ಯ, 136 ಇನ್ನಿಂಗ್ಸ್) ಕಡಿಮೆ ಇನ್ನಿಂಗ್ಸ್ ನಲ್ಲಿ ನಾಯಕನಾಗಿ 5 ಸಾವಿರ ರನ್ ಹೊಡೆದಿದ್ದರು.

ಭಾರತದ ಪರವಾಗಿ ಧೋನಿ ನಾಯಕನಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇಲ್ಲಿಯವರೆಗೆ 303 ಇನ್ನಿಂಗ್ಸ್ ಗಳಿಂದ 11,207 ರನ್‍ಗಳನ್ನು ಹೊಡೆದಿದ್ದರು. ಕೊಹ್ಲಿ ಭಾನುವಾರದ ಪಂದ್ಯದಲ್ಲಿ 89 ರನ್ ಹೊಡೆಯುವ ಮೂಲಕ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕೊಹ್ಲಿ ಈಗ 199 ಇನ್ನಿಂಗ್ಸ್ ಗಳಿಂದ 11,208 ರನ್ ಹೊಡೆದಿದ್ದಾರೆ. ಇದನ್ನೂ ಓದಿ: ಗಂಗೂಲಿ, ಸಚಿನ್ ಹಿಂದಿಕ್ಕಿ ವಿಶ್ವ ಕ್ರಿಕೆಟ್‍ನಲ್ಲಿ ಹಿಟ್‍ಮ್ಯಾನ್ ಸಾಧನೆ

ಕೊಹ್ಲಿ ಕೊನೆಯ ಪಂದ್ಯದಲ್ಲಿ 89 ರನ್(91 ಎಸೆತ, 8 ಬೌಂಡರಿ) ಹೊಡೆದು ಜಯಕ್ಕೆ 15 ರನ್‍ಗಳ ಅಗತ್ಯವಿದ್ದಾಗ ಔಟಾದರು. ಮೊದಲ ಪಂದ್ಯದಲ್ಲಿ 16 ರನ್, ಎರಡನೇ ಪಂದ್ಯದಲ್ಲಿ 78 ರನ್(76 ಎಸೆತ, 6 ಬೌಂಡರಿ) ಹೊಡೆದ ಕೊಹ್ಲಿ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Share This Article
Leave a Comment

Leave a Reply

Your email address will not be published. Required fields are marked *