ಇರಾಕ್‍ನಲ್ಲಿ ಕಿಡ್ನಾಪ್ ಆಗಿದ್ದ 39 ಭಾರತೀಯರು ಐಸಿಸ್‍ನಿಂದ ಹತ್ಯೆ

Public TV
2 Min Read

ನವದೆಹಲಿ: 2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಪಹಣಕ್ಕೀಡಾಗಿದ್ದ 39 ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೊಸುಲ್ ನಿಂದ ಅಪಹರಣ ಮಾಡಿದವರ ಹತ್ಯೆ ಕುರಿತು ಖಚಿತ ಮಾಹಿತಿ ಪಡಿಸಿಕೊಳ್ಳಲು ಆಳವಾದ ರೇಡಾರ್ ಬಳಕೆ ಮಾಡಲಾಗಿದ್ದು, ಹತ್ಯೆಯಾದ ಭಾರತೀಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಎಲ್ಲರ ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿತ್ತು. ಮೃತ ದೇಹಗಳನ್ನು ಗುರುತಿಸಲು ಡಿಎನ್‍ಎ ಪರೀಕ್ಷೆಗಾಗಿ ಬಾಗ್ದಾದ್ ಗೆ ಕಳುಹಿಸಲಾಗಿದೆ. ಸೋಮವಾರ ನಮಗೆ ಲಭಿಸಿದ ಮಾಹಿತಿ ಪ್ರಕಾರ 39 ಮೃತದೇಹಗಳಲ್ಲಿ 38 ಮಂದಿಯ ಡಿಎನ್‍ಎ ಸ್ಯಾಪಲ್ ಮ್ಯಾಚ್ ಆಗಿದೆ. 39ನೇ ಮೃತ ದೇಹದ ಡಿಎನ್‍ಎ ಶೇ. 70 ರಷ್ಟು ಮ್ಯಾಚ್ ಆಗಿದೆ ಎಂದರು.

ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು.

ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಐಸಿಸ್ ಉಗ್ರರಿಂದ ತಪ್ಪಿಸಿಕೊಂಡು ಬಂದ ಹರ್ಜಿತ್ ಮಾಸಿಹ್ ಕಥೆ ಸುಳ್ಳು. ಐಸಿಸಿ ಉಗ್ರರು ಭಾರತೀಯರ ಜೊತೆಗೆ 51 ಬಾಂಗ್ಲಾದೇಶಿ ಕಾರ್ಮಿಕರನ್ನು ಒತ್ತೆಯಾಗಿರಿಸಿಕೊಂಡಿದ್ದರು ಈ ವೇಳೆ ಬಾಂಗ್ಲಾದೇಶ ಒತ್ತೆಯಾಳುಗಳ ಜೊತೆ ಅಲ್ಲಿಂದ ವಾಪಸ್ ಹರ್ಜಿತ್ ಮಾಸಿಹ್ ಬಂದಿದ್ದರು ಎಂದು ಸುಷ್ಮಾ ಸ್ವರಾಜ್ ಸದನಕ್ಕೆ ಸ್ಪಷ್ಟಪಡಿಸಿದರು.

ಅಪಹರಣ ಮಾಡಿ ಹತ್ಯೆ ಮಾಡಲಾಗಿರುವ 39 ಮಂದಿ ಭಾರತೀಯರು ಟರ್ಕಿ ಮೂಲಕ ನಿರ್ಮಾಣ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. 2014ರಲ್ಲಿ ಐಸಿಸ್ ನಿಂದ ಅಪಹರಣಕ್ಕೆ ಒಳಗಾದ ಸಂದರ್ಭದಲ್ಲಿ ಮೊಸೂಲ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಅಪಹರಣಕ್ಕೆ ಒಳಗಾದ ಭಾರತೀಯರ ಪೈಕಿ ಪಂಜಾಬ್ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಮೃತ ದೇಹ ಪತ್ತೆ ಮಾಡಿದ್ದು ಹೇಗೆ?
ಮೃತ ದೇಹಗಳ ಪತ್ತೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಅಳವಾದ ರಡಾರ್ ಬಳಕೆ ಮಾಡಿ ಸಾಮೂಹಿಕವಾಗಿ ಸಮಾಧಿ ಮಾಡಿದ್ದ ದೇಹಗಳನ್ನು ಪತ್ತೆ ಮಾಡಲಾಗಿತ್ತು. ಬಳಿಕ ಮೃತ ದೇಹದ ಬಳಿ ಪತ್ತೆಯಾದ ಗುರುತಿನ ಚೀಟಿ, ಇರಾನಿ ದೇಶಕ್ಕೆ ಸಂಬಂಧಿಸದ ಶೂ, ಸಿಖ್ ಪೇಟಾ ಹಾಗೂ ಮೃತ ದೇಹಗಳ ಅವಶೇಷಗಳಲ್ಲಿ ದೊರೆತ ಉದ್ದ ಕೂದಲುಗಳನ್ನು ಸಂಗ್ರಹಿಸಲಾಯಿತು.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಭಾರತದಿಂದ ಕಾಣೆಯಾಗಿದ್ದ ವ್ಯಕ್ತಿಗಳ ಕುಟುಂಬ ಸದಸ್ಯರ ಡಿಎನ್‍ಎ ಸ್ಯಾಪಲ್ ಗಳನ್ನು ವಿದೇಶಾಂಗ ಇಲಾಖೆ ಇರಾಕ್ ಗೆ ಕಳುಹಿಸಿ ಕೊಡಲಾಗಿತ್ತು. ಬಾಗ್ದಾದ್ ನಲ್ಲಿ 39 ಮೃತ ದೇಹಗಳ ಡಿಎನ್‍ಎ ಪರೀಕ್ಷೆ ನಡೆಸಿ ಅವುಗಳನ್ನು ಕಾಣೆಯಾಗಿದ್ದ ಭಾರತೀಯ ಮಂದಿಯದ್ದೇ ಎಂದು ದೃಢಿಕರಿಸಲಾಯಿತು.

ಈ ಕುರಿತು ಪ್ರತಿಕ್ರಿಯೇ ನೀಡಿರುವ ವಿಕೆ ಸಿಂಗ್ ಅವರು, ಕಾಣೆಯಾಗಿದ್ದ ಕುಟುಂಬ ಸದಸ್ಯರ ಡಿಎನ್‍ಎ ಸಂಗ್ರಹಿಸಿ ಅವುಗಳನ್ನು ಮೃತದೇಹಗಳ ಅವಶೇಷಗಳಿಗೆ ಹೋಲಿಕೆ ಮಾಡುವುದು ಬಹುದೊಡ್ಡ ಕಾರ್ಯವಾಗಿತ್ತು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *