37 ವರ್ಷದ ಹಿಂದೆ ಇದೇ ದಿನ ವಿಶ್ವಕಪ್ ಗೆದ್ದಿದ್ದ ಭಾರತ- ಹೀಗಿತ್ತು ಪಂದ್ಯದ ರೋಚಕತೆ

Public TV
2 Min Read

– ಕಪಿಲ್ ಪಡೆಗೆ ಹಿಂದಿನ ದಿನವೇ ಸಿಕ್ಕಿತ್ತು ಬೋನಸ್!

ಲಂಡನ್: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಈ ದಿನ ನೆನಪಿನಲ್ಲಿ ಉಳಿಯುವ ದಿನ. ಮೂವತ್ತೇಳು ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿತ್ತು.

ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 1983ರ ಜೂನ್ 25ರಂದು ಮೂರನೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆದಿತ್ತು. ಈ ವೇಳೆ ಎರಡು ಬಾರಿ ವಿಜೇತವಾಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತವು 43 ರನ್‍ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.

ಫೈನಲ್ ಪಂದ್ಯದಲ್ಲಿ ವಿಂಡೀಸ್ ಬೌಲರ್‌ಗಳ ದಾಳಿಯಲ್ಲಿ ಭಾರತವು 54.5 ಓವರ್‌ಗಳಲ್ಲಿ 183 ರನ್‍ಗಳಿಗೆ ಸರ್ವಪತನ ಕಂಡಿತ್ತು. ವಿಶೇಷವೆಂದರೆ ಭಾರತವು ಕೊನೆಯ ಏಳು ವಿಕೆಟ್‍ಗಳನ್ನು 93 ರನ್‍ಗಳಿಗೆ ಕಳೆದುಕೊಂಡರೆ, ವಿಂಡೀಸ್ ತನ್ನ ಕೊನೆಯ ಒಂಬತ್ತು ವಿಕೆಟ್‍ಗಳನ್ನು ಕೇವಲ 90 ರನ್‍ಗಳಿಗೆ ಕಳೆದುಕೊಂಡಿತ್ತು.

ವಿಂಡೀಸ್ ತಂಡಕ್ಕೆ ಕಡಿಮೆ 183 ರನ್‍ಗಳ ಗುರಿಯನ್ನು ನೀಡಿದ್ದ ಭಾರತಕ್ಕೆ ಬೌಲರ್‌ಗಳು ಆಸರೆಯಾದರು. ಪರಿಣಾಮ ಟೀಂ ಇಂಡಿಯಾ ಬೌಲರ್‌ಗಳು ವಿಂಡೀಸ್ ತಂಡವನ್ನ ಕೇವಲ 140 ರನ್‍ಗಳಿಗೆ ಎಲ್ಲ ವಿಕೆಟ್ ಕಬಳಿಸಿದರು. ಮೊಹಿಂದರ್ ಅಮರನಾಥ್ ಮತ್ತು ಮದನ್ ಲಾಲ್ ಅವರು ತಲಾ ಮೂರು ವಿಕೆಟ್ ಪಡೆದು ಮಿಂಚಿದ್ದರು. ಅಂದಿನ ಕ್ಯಾಪ್ಟನ್ ಕಪಿಲ್ ದೇವ್ 11 ಓವರ್ ಬೌಲಿಂಗ್ ಮಾಡಿ ನಾಲ್ಕು ಮೇಡನ್ ದಾಖಲಿಸಿದ್ದರು.

ರೋಜರ್ ಬಿನ್ನಿ:
ಟೀಂ ಇಂಡಿಯಾ ಮಾಜಿ ಆಟಗಾರ ರೋಜರ್ ಬಿನ್ನಿ 1983ರ ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅವರು ಟೂರ್ನಿಯುದ್ದಕ್ಕೂ ಪ್ರಮುಖ ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್ ಸೇರಿದಂತೆ ಒಟ್ಟು 18 ವಿಕೆಟ್ ಕಬಳಿಸಿದ್ದರು. ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ ಅವರು 23 ರನ್ ನೀಡಿದ 1 ವಿಕೆಟ್ ಪಡೆದಿದ್ದರು.

ಮ್ಯಾನ್ ಆಫ್ ದಿ ಮ್ಯಾಚ್:
ಬಾಲ್‍ನೊಂದಿಗೆ ಮ್ಯಾಜಿಕ್ ಮಾಡಿ ವಿಕೆಟ್ ಕಬಳಿಸಿದ ಅಮರನಾಥ್ ಅವರು ಸತತ ಎರಡನೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೆಮಿಫೈನಲ್‍ನಲ್ಲೂ ಇಂಗ್ಲೆಂಡ್ ವಿರುದ್ಧ ಪ್ರಶಸ್ತಿ ಗೆದ್ದಿದ್ದರು.

ನಾಯಕತ್ವ ಕೈಬಿಟ್ಟ ಕ್ಲೈವ್ ಲಾಯ್ಡ್:
ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಹ್ಯಾಟ್ರಿಕ್ ಗೆಲುವಿಗೆ ಟೀಂ ಇಂಡಿಯಾ ಬ್ರೇಕ್ ಹಾಕಿತ್ತು. ಇದರಿಂದಾಗಿ ಆಘಾತಕ್ಕೆ ಒಳಗಾದ ಕೆಲವೇ ಕ್ಷಣಗಳಲ್ಲಿ ಅಂದಿನ ವಿಂಡೀಸ್ ತಂಡ ಕ್ಯಾಪ್ಟನ್ ಕ್ಲೈವ್ ಲಾಯ್ಡ್ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಮತ್ತು ಹಿರಿಯ ಆಟಗಾರರು ಮರುದಿನ ಅವರ ರಾಜೀನಾಮೆಯನ್ನು ಹಿಂಪಡೆಯಲು ಮನವೊಲಿಸಿದ್ದು ಇತಿಹಾಸ.

ಭಾರತ ಆತಿಥೇಯ ಇಂಗ್ಲೆಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದಾಗ ಜಾಗತಿಕ ಕ್ರಿಕೆಟ್‍ನಲ್ಲಿ ಭಾರೀ ಸಂಚಲನ ಮೂಡಿತ್ತು. ಬಿಸಿಸಿಐ ಅಧಿಕಾರಿಗಳೆಲ್ಲ ಜೂನ್ 24ರಂದು ಸಂಜೆ ಸಭೆ ಸೇರಿ, ತಂಡದ ಸದಸ್ಯರಿಗೆಲ್ಲ 25 ಸಾವಿರ ರೂ. ಬೋನಸ್ ಪ್ರಕಟಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *