33 ರನ್ ಅಂತರದಲ್ಲಿ 5 ವಿಕೆಟ್ ಪತನ- ಆರ್‌ಸಿಬಿಗೆ ಹೀನಾಯ ಸೋಲು

Public TV
3 Min Read

– ಮೊದಲ ಸ್ಥಾನಕ್ಕೆ ಏರಿದ ಡೆಲ್ಲಿ
– ಮೂರನೇ ಸ್ಥಾನದಲ್ಲಿ ಆರ್‌ಸಿಬಿ

ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಬೆಂಗಳೂರು ವಿರುದ್ಧ 59 ರನ್ ಗಳ ಗೆಲುವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಅಂಕಗಳೊಂದಿಗೆ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದೆ.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 197 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್.ಸಿ.ಬಿ ತಂಡದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಐಪಿಎಲ್‍ನಲ್ಲಿ ಟೂರ್ನಿಯ ಪಂದ್ಯದಲ್ಲಿ 190 ಪ್ಲಸ್ ರನ್ ಗಳಿಸಿದ ಯಾವುದೇ ಪಂದ್ಯವನ್ನು ಇದುವರೆಗೂ ಸೋಲದೇ ಡೆಲ್ಲಿ ತಂಡ ತನ್ನ ಸಾಧನೆಯನ್ನು ಮುಂದುವರಿಸಿತು.

94 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ಯಾವುದೇ ಹೋರಾಟ ನಡೆಸದೇ 33 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಪರಿಣಾಮ ಹೀನಾಯ ಸೋಲು ಕಾಣುವುದರೊಂದಿಗೆ -1.355 ರನ್ ರೇಟ್‍ನೊಂದಿಗೆ ಮೂರನೇ ಸ್ಥಾನದಲ್ಲಿದೆ.

197 ರನ್ ಗಳ ಬೃಹತ್ ಮೊತ್ತದ ಗುರಿ ಪಡೆದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಇನ್ನಿಂಗ್ಸ್ ನ 2ನೇ ಓವರಿನ ಅಂತಿಮ ಎಸೆತದಲ್ಲಿ 4 ರನ್ ಗಳಿಸಿದ್ದ ಪಡಿಕ್ಕಲ್ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ 13 ರನ್ ಗಳಿಸಿದ್ದ ಫಿಂಚ್, ಅಕ್ಷರ್ ಪಟೇಲ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಗೆ ನಡೆದರು. ಇದಕ್ಕೂ ಮುನ್ನ ಇನ್ನಿಂಗ್ಸ್ ನ ಮೊದಲ ಓವರ್ ಬೌಲ್ ಮಾಡಿದ ರಬಾಡಾ ಬೌಲಿಂಗ್‍ನಲ್ಲಿ ಫಿಂಚ್ ಜೀವದಾನ ಪಡೆದಿದ್ದರು ಮಿಂಚಲು ವಿಫಲರಾದರು.

ಅಶ್ವಿನ್ ಮಂಕಡ್ ವಾರ್ನಿಂಗ್: ಈ ಹಿಂದೆ ಮಂಕಡ್ ಔಟ್ ಮಾಡಿ ಹೆಚ್ಚು ಚರ್ಚೆಗೆ ಕಾರಣವಾಗಿದ್ದ ಆರ್.ಅಶ್ವಿನ್ ಇಂದಿನ ಪಂದ್ಯದಲ್ಲಿ ಫಿಂಚ್ ವಾರ್ನಿಂಗ್ ನೀಡಿದ್ದರು. 3ನೇ ಓವರಿನ 4ನೇ ಎಸೆತದಲ್ಲಿ ನಾನ್‍ಸ್ಟ್ರೈಕ್‍ನಲ್ಲಿದ್ದ ಫಿಂಚ್, ಬೌಲರ್ ಬೌಲ್ ಮಾಡುವ ಮುನ್ನವೇ ಕ್ರಿಸ್ ಬಿಟ್ಟು ತೆರಳಿದ್ದರು. ಈ ಸಂದರ್ಭದಲ್ಲಿ ಫಿಂಚ್ ಅವರತ್ತ ನೋಡಿ ನಕ್ಕ ಅಶ್ವಿನ್ ಮಂಕಡ್ ವಾರ್ನಿಗ್ ನೀಡಿದರು.

4ನೇ ಓವರ್ ಅಂತ್ಯದ ವೇಳೆಗೆ 27 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ಕೊಹ್ಲಿ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಇನ್ನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಎಚ್ಚರಿಕೆ ಸಂದೇಶ ರವಾಸಿದರು. ಆದರೆ 9 ರನ್ ಗಳಿಸಿ ಆಡುತ್ತಿದ್ದ ಎಬಿ ಡಿಲಿಯರ್ಸ್, ಅನ್ರಿಚ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಆರ್.ಸಿ.ಬಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 43 ರನ್ ಗಳಿಸಿತ್ತು.

ಪ್ರಮುಖ ವಿಕೆಟ್‍ಗಳು ಉರುಳುತ್ತಿದಂತೆ ಕೊಹ್ಲಿ, ಮೋಯಿನ್ ಅಲಿ ನಿಧಾನಗತಿ ಬ್ಯಾಟಿಂಗ್‍ಗೆ ಮುಂದಾಗಿ ತಂಡದ ಮೊತ್ತವನ್ನು ಹೆಚ್ಚಿಸಲು ಮುಂದಾದರು, ಆದರೆ 12ನೇ ಓವರಿನಲ್ಲಿ ದಾಳಿಗಿಳಿದ ಅಕ್ಷರ್ ಪಟೇಲ್ 11 ರನ್ ಗಳಿಸಿದ್ದ ಅಲಿ ವಿಕೆಟ್ ಕಬಳಿಸಿ ಎದುರಾಳಿ ತಂಡಕ್ಕೆ ಹೊಡೆತ ನೀಡಿದರು. 14ನೇ ಓವರ್ ಎಸೆತ ರಬಾಡಾ ಬೌಲಿಂಗ್‍ನಲ್ಲಿ ಬಿರುಸಿನ ಆಟಕ್ಕೆ ಮುಂದಾದ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂದ್ಯದಲ್ಲಿ 39 ಎಸೆತ ಎದುರಿಸಿದ್ದ ಕೊಹ್ಲಿ 2 ಬೌಂಡರಿ, ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದ್ದರು.

15ನೇ ಓವರ್ ಅಂತ್ಯಕ್ಕೆ ಆರ್.ಸಿ.ಬಿ ಗೆಲುವಿಗೆ 30 ಎಸೆತಗಳಲ್ಲಿ 92 ರನ್ ಗಳ ಅಗತ್ಯವಿತ್ತು. ಆದರೆ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆರ್‌ಸಿಬಿ ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಮೊಯಿನ್ ಅಲಿ 11 ರನ್, ಸುಂದರ್ 17 ರನ್, ದುಬೆ 11 ರನ್, ಉದಾನ 1 ರನ್, ಸಿರಾಜ್ 5 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. 12 ರನ್ ಗಳಿಸಿದ ಸೈನಿ, ಯಾವುದೇ ರನ್ ಗಳಿಸದೆ ಚಹರ್ ಅಜೇಯರಾಗಿ ಉಳಿದರು.

 

ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರಬಾಡಾ 4 ಓವರ್ ಗಳಲ್ಲಿ 24 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿಸಿದರು. ಉಳಿದಂತೆ ಅಕ್ಷರ್ ಪಟೇಲ್, ಅನ್ರಿಚ್ ತಲಾ 2, ಅಶ್ವಿನ್ 1 ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣರಾದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಟೋಯ್ನಿಸ್ 53 ರನ್, ಪೃಥ್ವಿ ಶಾ 42 ರನ್, ಶಿಖರ್ ಧವನ್ 32 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *