ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲು: ವಿಶ್ವಾಸ ಗೆದ್ದ ಮೋದಿ!

Public TV
5 Min Read

– ನನ್ನನ್ನು ಈ ಸ್ಥಾನದಿಂದ ಎದ್ದೇಳಿಸಲು 125 ಕೋಟಿ ದೇಶವಾಸಿಗಳಿಂದ ಮಾತ್ರ ಸಾಧ್ಯ
– ರಾಹುಲ್ ಬಲವಂತದ ಆಲಿಂಗನಕ್ಕೆ ಮೋದಿ ತಿರುಗೇಟು

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲಾಗಿದೆ. ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಮೋದಿ ಉತ್ತರ ನೀಡಿದ ಬಳಿಕ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮತದಾನಕ್ಕೆ ಅನುಮತಿ ನೀಡಿದರು. ಸರ್ಕಾರದ ಪರ 325 ಮತಗಳು ಬಿದ್ದರೆ, ಅವಿಶ್ವಾಸ ನಿರ್ಣಯದ ಪರ 126 ಮತ ಬಂದಿತು. ಸದನದಲ್ಲಿ ಈ ವೇಳೆ ಒಟ್ಟು 451 ಸದಸ್ಯರು ಹಾಜರಿದ್ದರು.

ಬಿಜೆಪಿ ಸರ್ಕಾರದ ವಿರುದ್ಧ ಟಿಡಿಪಿ (ತೆಲಗು ದೇಶಂ ಪಾರ್ಟಿ) ಅವಿಶ್ವಾಸ ಗೊತ್ತುವಳಿ ಮಂಡಿಸಿದ ಚರ್ಚೆಯಲ್ಲಿ ವಿರೋಧ ಪಕ್ಷದ ಎಲ್ಲಾ ನಾಯಕರು ಮಾತನಾಡಿದ್ದರು. ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ರಾಹುಲ್ ಗಾಂಧಿ ತಮ್ಮ ಭಾಷಣದ ಕೊನೆಗೆ ಪ್ರಧಾನಿ ಮೋದಿಯವರನ್ನು ಆಲಿಂಗನ ಮಾಡಿಕೊಂಡಿದ್ದರು. ರಾಹುಲ್ ಆಲಿಂಗನ ಬಗ್ಗೆ ತಮ್ಮ ಭಾಷಣದ ಆರಂಭದಲ್ಲೇ ಪ್ರತಿಕ್ರಿಯಿಸಿದ ಮೋದಿ, ನನ್ನ ಬಳಿ ಬಂದ ರಾಹುಲ್ ಗಾಂಧಿ ಏಳಿ ಎದ್ದೇಳಿ ಅಂದ್ರು. ನನ್ನನ್ನು ಈ ಸ್ಥಾನದಿಂದ ಎದ್ದೇಳಿಸಲು 125 ಕೋಟಿ ಜನರಿಂದ ಮಾತ್ರ ಸಾಧ್ಯ ಎಂದು ತಿರುಗೇಟು ನೀಡಿದರು.

ಅವಿಶ್ವಾಸ ಮಾತು ಏಕೆ ಬಂತು ಎಂಬ ಪ್ರಶ್ನೆ ನನ್ನಲ್ಲಿ ಇನ್ನು ಇದೆ. ವಿಪಕ್ಷಗಳು ಮೋದಿ ಹಠಾವೋ ಎಂಬ ಉದ್ದೇಶದಿಂದ ಬಲ ಪ್ರದರ್ಶನಕ್ಕೆ ಮುಂದಾಗಿವೆ. ಇದು ಬಲ ಪ್ರದರ್ಶನ ಅಲ್ಲ, ಬಲವಂತದ ಪ್ರದರ್ಶನ ಅಂತಾ ವಾಗ್ದಾಳಿ ನಡೆಸಿದರು. ಯಾರು ಅಧಿಕಾರಕ್ಕೆ ಬರೋದಿಲ್ಲವೋ, ಅವರು ಅಹಂಕಾರವನ್ನು ಅಳವಡಿಸಿಕೊಂಡಿದ್ದಾರೆ. 2019ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಪ್ರಧಾನಿ ಯಂತೆ ವ್ಯಂಗ್ಯ ಮಾಡಿದರು.

ವಿರೋಧ ಬಣಗಳು ಒಂದಾಗಿವೆ: ಕೇವಲ ಓರ್ವ ಮೋದಿಯನ್ನು ಹಿಂದಿಕ್ಕಿಲು ಎಲ್ಲ ವಿರೋಧ ಬಣಗಳು ಒಂದಾಗಿವೆ. ಪ್ರಧಾನಿ ಕುರ್ಚಿ ಏರಲು ರಾಹುಲ್ ಗಾಂಧಿ ಆತುರರಾಗಿದ್ದಾರೆ. ಕೆಲವರು ತಾವು ಶಿವಭಕ್ತರು ಅಂತಾ ಹೇಳಿಕೊಳ್ಳುತ್ತಿದ್ದಾರೆ. ನಾನು ಕೂಡ ಶಿವದೇವನನ್ನು ನಂಬುತ್ತೇನೆ ಮತ್ತು ಆರಾಧಿಸುತ್ತೇನೆ. ಇಂದು ಅದೇ ಶಿವನಲ್ಲಿ 2024ರಲ್ಲಿ ರಾಹುಲ್ ಇದೇ ರೀತಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಿ ಎಂದು ಕೇಳುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ತಾವೇ ಅಧಿಕಾರಕ್ಕೆ ಬರೋದು ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ದೇಶದಲ್ಲಿ ಈಗಾಗಲೇ ಮುಳುಗಿದೆ. ಕಾಂಗ್ರೆಸ್ ಜೊತೆ ಹೋಗುವವರು ಮುಳಗಲಿದ್ದೀರಿ, ಹಾಗಾಗಿ ಅವರ ಜೊತೆ ಹೋಗುವುದನ್ನು ನಿಲ್ಲಿಸಿ ಅಂದ್ರು.

ನಮ್ಮದು ಕೆಲಸ ಮಾಡುವ ಸರ್ಕಾರ. ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಎಲ್ಲ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡಬಹುದಿತ್ತು ಆದ್ರೆ ಮಾಡಲಿಲ್ಲ. ಜನ್‍ಧನ್ ಯೋಜನೆಯಲ್ಲಿ ಬ್ಯಾಂಕ್ ನೋಡದವರು ಖಾತೆಗಳನ್ನು ಹೊಂದಿದ್ದಾರೆ. ಇದೇ ವೇಳೆ ಸರ್ಕಾರದ ಯೋಜನೆ ಕಾರ್ಯಕ್ರಮಗಳ ಉದಾಹರಣೆಯನ್ನು ನೀಡುವ ಮೂಲಕ ವಿರೋಧ ಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು.

ಡೋಕ್ಲಾಂ ವಿಷಯದ ಬಗ್ಗೆ ಗೊತ್ತಿದ್ದರೆ ಮಾತ್ರ ಮಾತನಾಡಿ. ಗೊತ್ತಿಲ್ಲವೆಂದ್ರೆ ಮಾತನಾಡಲು ಹೋಗಬಾರದು. ಎರಡು ದೇಶಗಳ ವಿಷಯದ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ದೇಶದ ಭದ್ರತೆಯ ವಿಷಯದಲ್ಲಿ ಸಣ್ಣತನ ತೋರಿಸಬಾರದು. ರೆಫೆಲ್ ಮಿಸೈಲ್ ವಿಚಾರದಲ್ಲಿಯೂ ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ದೇಶದ ಭದ್ರತೆಯ ಬಗ್ಗೆ ಸ್ವಲ್ಪವೂ ಜವಾಬ್ದಾರಿಗಳು ನಿಮಗೆ ಇಲ್ಲವಾ? ಎಂದು ಪ್ರಶ್ನಿಸಿದರು. ರೆಫೆಲ್ ವಿಚಾರದಲ್ಲಿ ಕಾಂಗ್ರೆಸ್ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರೆಫೆಲ್ ಒಪ್ಪಂದದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಈ ವೇಳೆ ವಿರೋಧ ಪಕ್ಷದ ನಾಯಕರು ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾದರು. ವಿರೋಧ ನಾಯಕರ ಗಲಾಟೆ ನೋಡಿ ಒಂದು ಕ್ಷಣ ಆಕ್ರೋಶಗೊಂಡ ಪ್ರಧಾನಿಗಳು ಎಷ್ಟು ಚೀರಾಡುತ್ತೀರೋ ಚೀರಾಡಿ. ಇದು ಸತ್ಯವನ್ನು ಮರೆ ಮಾಡುವ ಪ್ರಯತ್ನವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಸೈನಿಕರಿಗೆ ಅವಮಾನ ಮಾಡಬೇಡಿ: ರೆಫೆಲ್ ಒಪ್ಪಂದ ಎರಡು ಜವಾಬ್ದಾರಿ ಸರ್ಕಾರಗಳ ನಡುವೆ ಆಗಿದೆ. ವಿರೋಧ ಪಕ್ಷದ ನಾಯಕರು ದೇಶದ ಸೇನಾಧಿಕಾರಿಗಳಿಗೆ ಬಳಸಿರುವ ಮಾತುಗಳು ತುಂಬಾ ಕೆಳಮಟ್ಟದಲ್ಲಿತ್ತು. ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಅವಮಾನ ಮಾಡಿದ್ದೀರಿ. ನಿಮಗೆ ಬೈಯ್ಯುವ ಹಾಗಿದ್ದೀರಿ ನಿಮ್ಮ ಮುಂದೆ ನಾನು ನಿಂತಿದ್ದೇನೆ. ನನಗೆ ನೀವು ಬೈಯಬಹುದು, ದೇಶದ ಸೈನಿಕರಿಗಾಗಿ ನಾನು ಎಲ್ಲವನ್ನು ಸಹಿಸಿಕೊಳ್ಳುತ್ತೇನೆ. ಆದ್ರೆ ದೇಶದ ಸೈನಿಕರಿಗೆ ಅವಮಾನ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಈ ಮೊದಲು ದೇವೇಗೌಡರ ಸರ್ಕಾರ ಉಳಿಸಿ ಅವಮಾನಿಸಿದರು. ನಂತರ ಐ ಕೆ ಗುಜ್ರಾಲ್ ಸರ್ಕಾರವನ್ನು ಉರುಳಿಸಿದರು. ಕಾಂಗ್ರೆಸ್ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಎರಡರೆಡು ಬಾರಿ ಅವಿಶ್ವಾಸವನ್ನು ಮಂಡಿಸಿತ್ತು. ವೋಟಿಗೆ ಬದಲು ನೋಟು ಅಂತಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ಇತಿಹಾಸದ ಉದಾಹರಣೆಗಳನ್ನು ನೀಡುವ ಮೂಲಕ ವಿರೋಧಿಗಳು ತಿವಿದರು.

ಕಣ್ಣಸನ್ನೆ: ರಾಹುಲ್ ಗಾಂಧಿ ನನಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅಂತಾ ಸವಾಲು ಹಾಕುತ್ತಾರೆ. ಆದ್ರೆ ನಮಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಮಗೆ ಸಾಧ್ಯವಿಲ್ಲ. ನೀವು ಕೇವಲ ನಾಮದಾರ್ ನಾವು ಕಾಮದಾರ್ ಎಂದು ತಿರುಗೇಟು ನೀಡಿದರು. ಈ ಹಿಂದೆ ಕಾಂಗ್ರೆಸ್ ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದ ಜಯಪ್ರಕಾಶ್, ಮೂರಾರ್ಜಿ ದೇಸಾಯಿ, ಪ್ರಣಬ್ ಮುಖರ್ಜಿ, ಶರದ್ ಪವಾರ್ ಅಂತಹ ಹಿರಿಯ ನಾಯಕರ ಸ್ಥಿತಿ ಏನಾಗಿದೆ ನಮ್ಮೆಲ್ಲರಿಗೂ ತಿಳಿದಿದೆ. ಕಣ್ಣಲ್ಲಿ ಕಣ್ಣಿಟ್ಟು ಸವಾಲು ಹಾಕುವವವರ ಕಣ್ಣಸನ್ನೆ ಇಂದು ಇಡೀ ದೇಶವೇ ನೋಡಿದೆ ಎಂದು ತಿವಿದರು.

ದೇಶದ ಜನರ ದುಃಖದಲ್ಲಿ ನಾನು ಭಾಗಿದಾರ: ಇಂದು ನಾನು ಯಾರನ್ನು ಬಿಡಲ್ಲ. ಎಲ್ಲರ ನಾಯಕರ ಲೆಕ್ಕವನ್ನು ಪೂರ್ಣ ಮಾಡುತ್ತೇನೆ, ಯಾರು ಭಯ ಪಡಬಾರದು ಎಂದು ಹೇಳುವ ಮೂಲಕ ಭಾಷಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಸಂಸದರ ವಿರುದ್ಧ ಗುಡುಗಿದರು. ರಾಹುಲ್ ಗಾಂಧಿ ನಾನು ದೇಶದ ಚೌಕಿದಾರ ಅಲ್ಲ, ಭಾಗಿದಾರ ಎಂದು ಹೇಳುತ್ತಾರೆ. ಹೌದು ನಾನು ಭಾಗಿದಾರ, ದೇಶದ ಜನರ ದುಃಖದಲ್ಲಿ ನಾನು ಭಾಗಿದಾರನಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತದೆ. ನಾನೇನು ನಿಮ್ಮ ಹಾಗೆ ಸೌಧಾಗಾರ(ದಲ್ಲಾಳಿ), ಟೋಕಿದಾರ ಅಲ್ಲ ಅಂತಾ ರಾಹುಲ್ ಗಾಂಧಿಯ ಕಾಲೆಳೆದರು.

ತನ್ನ ಲಾಭಕ್ಕಾಗಿ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಿದೆ. ತನ್ನ ರಾಜಕೀಯಕ್ಕಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎಂದು ರಾಜ್ಯಗಳು ಒಡೆದಿದೆ. ಆದ್ರೆ ಈ ಕಾಂಗ್ರೆಸ್‍ಗೆ ಎರಡೂ ರಾಜ್ಯಗಳು ಸಿಗಲಿಲ್ಲ. ಈ ಹಿಂದೆ ಭಾರತದಿಂದ ಪಾಕಿಸ್ತಾನವನ್ನು ಇಬ್ಬಾಗ ಮಾಡಿದ್ದು ಕಾಂಗ್ರೆಸ್. ಅಂದಿನ ಕಾಂಗ್ರೆಸ್ ಒಡೆದು ಆಳಿದ ನೀತಿಯಿಂದಾಗಿ ಭಾರತ ಇಂದು ತೊಂದರೆ ಅನುಭವಿಸುತ್ತಿದೆ.

ಕೇಸಿನೇನಿ ಶ್ರೀನಿವಾಸ ವ್ಯಂಗ್ಯ: ಪ್ರಧಾನಿ ಮೋದಿ ಓರ್ವ ಅಧ್ಭುತ ಕಲಾವಿದ. ಒಂದೂವರೆ ಗಂಟೆಗಳ ಕಾಲ ನನಗೆ ಬಾಲಿವುಡ್‍ನ ಬ್ಲಾಕ್ ಬಸ್ಟರ್ ಸಿನಿಮಾ ನೋಡಿದಂತೆ ಆಯಿತು. ಪ್ರಧಾನಿ ಮೋದಿ 2014ರಲ್ಲಿಯೂ ಇಂತಹದ ದೊಡ್ಡ ನಾಟಕ ಮಾಡುವ ಮೂಲಕ ಜನರನ್ನು ಮೋಸಗಳಿಸಿದ್ದಾರೆ. ಆಂಧ್ರದ ಅವೈಜ್ಞಾನಿಕ ವಿಭಜನೆಗೂ ಬಿಜೆಪಿಯೇ ಕಾರಣವಾಗಿದೆ. ನಮಗೆ ಕೇವಲ ಭರವಸೆಗಳನ್ನು ನೀಡಿದ್ದು, ಆದ್ರೆ ಯಾವುದೇ ಈಡೇರಿಲ್ಲ. ಮೋದಿಯವರು ತೆಲುಗು ತಾಯಿಯನ್ನು ಕೊಂದು ವಿಭಜನೆ ಮಾಡಲಾಯಿತು ಅಂದ್ರು. ಆದ್ರೆ ಮೋದಿ ಆಂಧ್ರವನ್ನು ಕೈಮಾ ಮಾಡಿದ್ದಾರೆ. ಪ್ರಪಂಚದ ಅದ್ಭುತ ನಟ ಎಂದು ಮೋದಿಯವರಿಗೆ ಪ್ರಶಸ್ತಿ ನೀಡಬಹುದು ಎಂದು ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ ವ್ಯಂಗ್ಯಮಾಡಿದರರು.

Share This Article
Leave a Comment

Leave a Reply

Your email address will not be published. Required fields are marked *