ಯುಪಿಯಲ್ಲಿ 12 ಲಕ್ಷ ಕೋಟಿ ಮೌಲ್ಯದ 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆ

Public TV
2 Min Read

ಲಕ್ನೋ: ಉತ್ತರ ಪ್ರದೇಶದಲ್ಲಿ ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ ಮೌಲ್ಯದ, 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದು ಭಾರತದ ಈಗಿನ ಚಿನ್ನದ ನಿಕ್ಷೇಪಗಳ ಮೌಲ್ಯಕ್ಕಿಂತ 5 ಪಟ್ಟು ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸೋನ್‍ಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ 3,000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ಈ ಚಿನ್ನದ ನಿಕ್ಷೇಪವನ್ನು ಹರಾಜು ಹಾಕಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮದಲ್ಲಿ ಸುಮಾರು 3,000 ಟನ್ ಚಿನ್ನದ ನಿಕ್ಷೇಪವಿದೆ ಎಂದು ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ ಮತ್ತು ಉತ್ತರ ಪ್ರದೇಶ ಭೂ ವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯ ಇತ್ತೀಚಿಗಷ್ಟೆ ವರದಿ ಮಾಡಿತ್ತು. ಇದನ್ನೂ ಓದಿ:  ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ನಿಕ್ಷೇಪವಿದ್ದು, ಈಗ ಸೋನ್‍ಭದ್ರದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಭಾರತದಲ್ಲಿ ಈಗಿರುವ ಚಿನ್ನದ ಗಣಿಯ ಮೌಲ್ಯಕ್ಕಿಂತ ಐದು ಪಟ್ಟು ಹೆಚ್ಚಿದೆ. ಅಲ್ಲದೆ ಇದರ ಮೌಲ್ಯ ಸುಮಾರು 12 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಇದೆ ಎನ್ನಲಾಗಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

ಉತ್ತರ ಪ್ರದೇಶದ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಇತ್ತೀಚೆಗಷ್ಟೆ ಈ ಬಗ್ಗೆ ಅಧಿಕೃತ ಪತ್ರ ಹೊರಡಿಸಿತ್ತು. ಸೋನ್ ಪಹಡಿಯಲ್ಲಿ 2,943.26 ಟನ್ ಚಿನ್ನದ ನಿಕ್ಷೇಪ ಹಾಗೂ ಹಾರ್ಡಿಯಲ್ಲಿ 646.15 ಕೆಜಿ ಚಿನ್ನದ ನಿಕ್ಷೇಪ ಪತ್ತೆ ಆಗಿವೆ ಎಂದು ವರದಿ ನೀಡಿತ್ತು.

ಚಿನ್ನದ ನಿಕ್ಷೇಪ ಹರಾಜಿಗೆ ಸರ್ಕಾರ ಸಜ್ಜು:
ಇ-ಟೆಂಡರಿಂಗ್ ಪ್ರಕ್ರಿಯೆ ಮೂಲಕ ಪತ್ತೆಯಾಗಿರುವ ಚಿನ್ನಸ ನಿಕ್ಷೇಪವನ್ನು ಹರಾಜು ಹಾಕಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಚಿನ್ನದ ನಿಕ್ಷೇಪಗಳ ಬ್ಲಾಕ್‍ಗಳನ್ನು ಹರಾಜು ಮಾಡಲು ಸರ್ಕಾರ ಏಳು ಸದಸ್ಯರ ತಂಡವನ್ನು ರಚಿಸಿದ್ದು, ಈ ತಂಡ ಇಡೀ ಪ್ರದೇಶವನ್ನು ಸಮೀಕ್ಷೆ ನಡೆಸಿ ಅದರ ವರದಿಯನ್ನು ತಯಾರಿಸಿ, ವರದಿಯನ್ನು ಲಕ್ನೋದ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಿವೆ.

ಸೋನ್‍ಭದ್ರಾದಲ್ಲಿ ಚಿನ್ನದ ನಿಕ್ಷೇಪಗಳನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು ಬ್ರಿಟಿಷರು ಈ ಮೊದಲೇ ಆರಂಭಿಸಿದ್ದರು ಎನ್ನಲಾಗಿದೆ. ಆದರೆ 1992-93ರಲ್ಲಿ ಕೇಂದ್ರ ಭೂವಿಜ್ಞಾನ ತಂಡ ಚಿನ್ನದ ನಿಕ್ಷೇಪ ಪತ್ತೆ ಮಾಡುವ ಸಂಶೋಧನೆ ಆರಂಭಿಸಿತ್ತು.

ಈ ಬಗ್ಗೆ ಭಾರತೀಯ ಭೂ ಸರ್ವೇಕ್ಷಣೆ ಇಲಾಖೆಯ ನಿವೃತ್ತ ಸಿಬ್ಬಂದಿ ಪ್ರಥ್ವಿ ಮಿಶ್ರಾ ಪ್ರತಿಕ್ರಿಯಿಸಿ, ಚಿನ್ನದ ನಿಕ್ಷೇಪ ಪತ್ತೆಯಾದ ಸ್ಥಳವನ್ನು ಇರಡು ಭಾಗವಾಗಿ ಬೇರ್ಪಡಿಸಲಾಗಿದೆ. ಅಲ್ಲದೇ ಈ ಹಿಂದೆ ಇದೇ ಪ್ರದೇಶಲ್ಲಿ 1 ಕಿ.ಮಿ ಉದ್ದದ ಚಿನ್ನಡ ಕಲ್ಲು ಪತ್ತೆಯಾಗಿತ್ತು, ಅದು 15 ಮೀಟರ್ ಅಗಲವಿತ್ತು ಮತ್ತು 18 ಮೀಟರ್ ಎತ್ತರವಿತ್ತು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *