ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

Public TV
2 Min Read

ಬಾಗಲಕೋಟೆ: ಸದ್ಯ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಪರ್ಸೆಂಟೇಜ್ ಪ್ರಕರಣ ಕಾವು ಪಡೆದುಕೊಂಡಿರುವ ಹೊತ್ತಿನಲ್ಲೇ ಶಿರಹಟ್ಟಿ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದಾರೆ.

DINGALESWARA

ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಈಚೆಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಅವು ಏನಾಗ್ತಿವೆ ಎಂದು ಎಲ್ಲರಿಗೂ ಗೊತ್ತಿದೆ. ಒಬ್ಬ ಸ್ವಾಮೀಜಿಗೆ ಅನುದಾನ ಬಿಡುಗಡೆ ಮಾಡಬೇಕಿದ್ರೆ 30 ಪರ್ಸೆಂಟ್ ಕಮಿಷನ್ ಕೊಡಬೇಕು. ಆಗಲೇ ಮಠಗಳಳಲ್ಲಿ ಕಟ್ಟಡ ಕೆಲಸ ಶುರುವಾಗುತ್ತದೆ. ನೀವು ಇಷ್ಟು ದುಡ್ಡು ಕಟ್ಟದಿದ್ರೆ ನಿಮ್ಮ ಕೆಲಸ ಆಗಲ್ಲ ಎಂದು ಅಧಿಕಾರಿಗಳೇ ಹೇಳುವ ಪರಿಸ್ಥಿತಿ ಬಂದಿದೆ ಅಂದರೆ, ಭ್ರಷ್ಟಾಚಾರ ಎಲ್ಲಿಗೆ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

prahlad joshi

ಈಗ ಕಿಡಿಗೇಡಿಗಳ ಸರ್ಕಾರವೇ ಬರುತ್ತಿದೆ. ಉತ್ತರ ಕರ್ನಾಟಕಕ್ಕಾಗಿ ಕಾಕಾಗಳು (ಖಾದಿ -ಖಾವಿ) ಒಂದಾಗಿವೆ. ಆದರೆ, ಎಂದಿಗೂ ನಮ್ಮ ಹಕ್ಕು, ಸ್ವತ್ತನ್ನು ಕಳೆದುಕೊಳ್ಳಬಾರದು, ಅನ್ನೋದು ಎಸ್.ಆರ್.ಪಾಟೀಲ್ ಅವ್ರ ತಂಡದ ಮಾತಾಗಿದೆ. ಇನ್ನೇನು ಕೃಷ್ಣಾ ಮಹದಾಯಿ, ನವಲಿ ಯೋಜನೆಗಳು ಕಾರ್ಯರೂಪಕ್ಕೆ ಬಂದ್ರೆ ನಿಮ್ಮ ಭಾಗದ ಜನರ ಬಾಳು ಹಸನಾಗುತ್ತದೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ

SR PATIL

ಕೆಲಸ ಮಾಡದಿದ್ರೆ ಏನ್ ಉಪಯೋಗ?: ಈ ಭಾಗದ ಮಂತ್ರಿಯೊಬ್ಬ ಸದಾ ಪ್ರಧಾನಮಂತ್ರಿ ಅವರೊಂದಿಗೆ ಇರ್ತಾನೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಏನೂ ಕೊಡುಗೆ ನೀಡ್ತಿಲ್ಲ. ಪ್ರಧಾನಿ ಹಿಂದೆ ಓಡಾಡೋದೆ ದೊಡ್ಡ ಕೆಲಸ ಅನ್ಕೊಂಡಿದ್ದಾನೆ. ನೀನು ಪಿಎಂ ಜೊತೆ ಅಡ್ಡಾಡಿದ್ರೂ, ಈ ಭಾಗಕ್ಕೆ ಏನು ಮಾಡದೇ ಇದ್ರೆ, ಪ್ರಯೋಜನ ಇಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಏಕವಚನದಲ್ಲೇ ಸ್ವಾಮೀಜಿ ಲೇವಡಿ ಮಾಡಿದರು.

ದೆಹಲಿ ಸರ್ಕಾರಕ್ಕೆ ಟಾಂಗ್: ನಮ್ಮ ಉತ್ತರ ಕರ್ನಾಟಕದವರು ಸ್ವಲ್ಪ ಜಾಗೃತರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಕೆಲ ಭಾಗಗಳಲ್ಲಿ ಸ್ವಾಮೀಜಿಗಳಲ್ಲೇ ಇರುವ ತಾರತಮ್ಯ ನಿಲ್ಲಬೇಕು. ಈ ಹೋರಾಟ ಇಲ್ಲಿಗೆ ನಿಲ್ಲೋದು ಬೇಡ. ಇದು ಮುಂದುವರಿಯಬೇಕು. ಎಲ್ಲಿಯ ತನಕ ಈ ಭಾಗ ಅಭಿವೃದ್ಧಿ ಆಗುವವರೆಗೆ ನಿಮ್ಮ ಹೋರಾಟ ನಿಲ್ಲಬಾರದು. ನಾವೆಲ್ಲ ನಿಮ್ಮ ಜೊತೆಗಿರುತ್ತೇವೆ ಎಂದು ಹೋರಾಟಕ್ಕೆ ಬೆಂಬಲ ಘೋಷಿಸಿದರು.

Share This Article
Leave a Comment

Leave a Reply

Your email address will not be published. Required fields are marked *