ಬೆಂಗ್ಳೂರಲ್ಲಿ ಮೂವರ ಕಿಡ್ನಾಪ್, ಚಿಕ್ಕಬಳ್ಳಾಪುರದಲ್ಲಿ ಓರ್ವನ ಬರ್ಬರ ಹತ್ಯೆ- ಮಳೆಯಿಂದ ಸಿಕ್ಕಿಬಿದ್ರು ಆರೋಪಿಗಳು

Public TV
1 Min Read

ಚಿಕ್ಕಬಳ್ಳಾಪುರ: ಬೆಂಗಳೂರು ನಗರದ ನಿವಾಸಿಗಳನ್ನು ಅಪಹರಿಸಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಬಂದು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ನಡೆದಿದೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿರಟೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೂರ್ ಅಹಮದ್ ಕೊಲೆಯಾದ ದುರ್ದೈವಿ. ಜುನೈದ್ ಕೊಲೆಯ ಮೂಲ ಸೂತ್ರಧಾರನಾಗಿದ್ದು ತನ್ನ ಹಲವು ಸಹಚರರೊಂದಿಗೆ ನೂರ್ ಅಹಮದ್, ಮುಬಷೀರ್ ಮತ್ತು ಕಾಳು ಎಂಬವರು ಕೊಲೆಗೆ ಸಂಚು ರೂಪಿಸಿದ್ದನು. ಈ ಮೂವರನ್ನು ಜುನೈದ್ ಅಂಡ್ ಟೀಂ ಬೆಂಗಳೂರಿನ ಜೆ.ಸಿ.ನಗರದಲ್ಲಿ ಕಿಡ್ನಾಪ್ ಮಾಡಿತ್ತು.

ಅಪಹರಣದ ಬಳಿಕ ಜುನೈದ್ ಮೂವರನ್ನು ಚಿಗಟಗೇರೆ ಗ್ರಾಮದಲ್ಲಿಯ ಸ್ನೇಹಿತ ಆಶ್ರಫ್‍ನ ಫಾರಂನಲ್ಲಿ ಇರಿಸಿದ್ದನು. ಫಾರಂನಲ್ಲಿ ನೂರ್ ಅಹಮದ್ ನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇನ್ನೂ ಕಾಳು ಮತ್ತು ಮುಬಷೀರ್ ಎಂಬವರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಳೆಯಿಂದ ಸಿಕ್ಕಿಬಿದ್ರು: ಇತ್ತ ನೂರ್ ಅಹಮದ್, ಮುಬಷಿರ್ ಮತ್ತು ಕಾಳು ಅಪಹರಣದ ಬಳಿಕ ಮೂವರ ಕುಟುಂಸ್ಥರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಚರಣೆಗೆ ಇಳಿದ ಪೊಲೀಸರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸುವ ವೇಳೆಗೆ ದುಷ್ಕರ್ಮಿಗಳು ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಸೋಮವಾರ ಭಾರೀ ಮಳೆಯಾಗಿದ್ದರಿಂದ ಕಾರಿನ ಚಕ್ರಗಳು ಮಣ್ಣಿನಲ್ಲಿ ಸಿಲುಕಿವೆ. ಕೊನೆಗೆ ವಿಧಿಯಲ್ಲದೇ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.

ಕೊಲೆಗೆ ಕಾರಣ: ಮೂರು ದಿನಗಳ ಹಿಂದೆ ಹಣಕಾಸಿನ ವಿಚಾರದ ಸಂಬಂಧ ಜುನೈದ್ ಮೇಲೆ ಈ ಮೂವರು ಹಲ್ಲೆ ನಡೆಸಿದ್ದರು. ಜುನೈದ್ ಹೆಂಡತಿ ಹಾಗೂ ತಾಯಿ ಮುಂದೆಯೇ ಜುನೈದ್‍ನನ್ನ ಅರೆಬೆತ್ತಲೆ ಮಾಡಿ ಹಲ್ಲೆ ನಡೆಸಲಾಗಿತ್ತು. ಹಾಗಾಗಿ ಮನೆಯವರ ಮುಂದೆ ಅವಮಾನಿತನಾದ ಜುನೈದ್  ಮೂವರ ಕೊಲೆಗೆ ಸಂಚು ರೂಪಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ಪೊಲೀಸರು ಈಗಾಗಲೇ 21 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *