ಗಡಿ ಮೀರಿದ ಪ್ರೀತಿ – 25 ದಿನಗಳ ಬಳಿಕ ಹೆತ್ತವರನ್ನು ಸೇರಿದ 3ರ ಕಂದಮ್ಮ

Public TV
2 Min Read

– ಮಗು ಹೆತ್ತವರನ್ನು ಸೇರಲು ಸಹಾಯ ಮಾಡಿದ ಪಬ್ಲಿಕ್ ಟಿವಿ

ಮಡಿಕೇರಿ: ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ಮಹಾಮಾರಿ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತು ತಂದಿರುವುದಷ್ಟೇ ಅಲ್ಲ, ಹೆತ್ತವರಿಂದ ಮುದ್ದು ಕಂದಮ್ಮಗಳ ಪ್ರೀತಿಯನ್ನು ದೂರ ಮಾಡಿದೆ. ಅದಕ್ಕೆ ಇಂದು ಕೇರಳ, ಕರ್ನಾಟಕದ ಗಡಿಯಲ್ಲಿ ನಡೆದ ಮನಕಲಕುವ ದೃಶ್ಯವೇ ಸಾಕ್ಷಿಯಾಗಿದೆ.

ಹೌದು. ಕೇರಳದ ಇರಿಟ್ಟಿಯ ನಿವಾಸಿ ರಾಜೇಶ್ ಅವರ ಮೂರು ವರ್ಷದ ಮಗ ಆದಿಕೇಶ್ ರಾಜ್ ಕೊಡಗಿನ ಮಡಿಕೇರಿಯಲ್ಲಿ ತನ್ನ ಅಜ್ಜಿ ಮನೆಗೆ ಕಳೆದ 25 ದಿನಗಳ ಹಿಂದೆ ಬಂದಿದ್ದ. ಮಗು ಅಜ್ಜಿ ಮನೆಗೆ ಬಂದ ಎರಡೇ ದಿನಕ್ಕೆ ಕೊರೊನಾ ಮಹಾಮಾರಿ ಭೀತಿಗೆ ಇಡೀ ದೇಶದಲ್ಲೇ ಲಾಕ್‍ಡೌನ್ ಜಾರಿಯಾಯಿತು. ಜೊತೆಗೆ ಕೊಡಗಿನಿಂದ ಕೇರಳದ ಇರಿಟ್ಟಿಗೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿಯನ್ನು ಗಡಿಭಾಗ ಮಾಕುಟ್ಟದಲ್ಲಿ ಸಂಪೂರ್ಣ ಬಂದ್ ಮಾಡಲಾಗಿತ್ತು. ಹೀಗಾಗಿ ಆದಿಕೇಶ್ ಮಡಿಕೇರಿಯಲ್ಲೇ ಉಳಿಯಬೇಕಾಗಿತ್ತು.

ಹೀಗೆ ಕೊರೊನಾ ಭೀತಿಗೆ ರಾಜ್ಯ ರಾಜ್ಯಗಳ ನಡುವಿನ ಗಡಿಯೇ ಬಂದ್ ಆಗಿದ್ದರಿಂದ ಆದಿಕೇಶ್ ಬರೋಬ್ಬರಿ 25 ದಿನಗಳ ಕಾಲ ತಂದೆ ತಾಯಿಯಿಂದ ದೂರವಾಗಿ, ಹಗಲು ರಾತ್ರಿ ಹೆತ್ತವರನ್ನು ನೆನೆದು ಅಳುತ್ತಾ ಅಜ್ಜಿ ಮನೆಯಲ್ಲಿ ಕಾಲ ಕಳೆಯಬೇಕಾಗಿತ್ತು.

ದಿನಗಳು ಕಳೆದಂತೆ ಊಟ ತಿಂಡಿಯನ್ನು ತಿನ್ನುವುದನ್ನು ಮಗು ನಿಲ್ಲಿಸಿದ್ದನು. ಮಗುವನ್ನು ತಂದೆ ತಾಯಿಯ ಬಳಿಗೆ ಸೇರಿಸದೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ ಹೇಗೋ ಪರದಾಡಿ ಮಡಿಕೇರಿಯಿಂದ 55 ಕಿ.ಮೀ ದೂರದಲ್ಲಿ ಕೇರಳ-ಕರ್ನಾಟಕ ಗಡಿ ಬಂದ್ ಮಾಡಿರುವ ಜಾಗಕ್ಕೆ ಆದಿಕೇಶ್‍ನನ್ನು ಪಬ್ಲಿಕ್ ಟಿವಿ ಸಹಯೋಗದಲ್ಲಿ ಸಂಬಂಧಿ ಕರೆದೊಯ್ದರು. ಅತ್ತ ತನ್ನ ಮಗ ತಮ್ಮನ್ನು ನೆನೆದು ಅಳುತ್ತಿರುವ ವಿಷಯ ತಿಳಿದ ತಂದೆ ರಾಜೇಶ್ ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿಯಿಂದ 13 ಕಿಲೋ ಮೀಟರ್ ದೂರದಲ್ಲಿ ಗಡಿ ಬಂದ್ ಆಗಿರುವ ಕರ್ನಾಟಕದ ಮಾಕುಟ್ಟ ಗಡಿಗೆ ನಡೆದೇ ಬಂದಿದ್ದರು.

ಕೊನೆಗೆ ಮಾಕುಟ್ಟದಲ್ಲಿ ತಂದೆಯನ್ನು ನೋಡಿದ್ದೇ ತಡ ಆದಿಕೇಶ್ ಆನಂದಕ್ಕೆ ಪಾರವೇ ಇರಲಿಲ್ಲ. ತಂದೆಯ ತೋಳಿಗೆ ಹೋಗಿ ಕೊರಳನ್ನು ಬಿಗಿದಪ್ಪಿಕೊಂಡು ಖುಷಿಪಟ್ಟ. ತನ್ನ ತಂದೆಗೆ ತನ್ನನ್ನು ಸೇರಿಸಿದ ಮಾವನ ಗಡ್ಡವನ್ನು ಎಳೆದಾಡಿ ಮುತ್ತುಕೊಟ್ಟು ಮುದ್ದಾಡಿದ. ಮಗು ತಂದೆಯನ್ನು ಸೇರಿದ ಆ ಕ್ಷಣ, ತಂದೆ ಮತ್ತು ಮಗುವಿನ ಖುಷಿ, ಕೊರೊನಾದಿಂದ ರಾಜ್ಯದ ಗಡಿಗೆ ಆಳೆತ್ತರದ ಮಣ್ಣು ಸುರಿದಿದ್ದರೂ ಆ ಕರುಳ ಬಳ್ಳಿ ಸಂಬಂಧ ಮಾತ್ರ ಎಲ್ಲಾ ಅಡೆತಡೆಗಳನ್ನು ಮೀರಿ ಒಂದಾದ ಆ ಕ್ಷಣ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಕೊರೊನಾ ಎಫೆಕ್ಟ್ ನಡುವೆಯೂ ಪೋಷಕರ ಬಳಿ ಮಗುವನ್ನು ಸೇರಿಸಿದ ಕಾರ್ಯಕ್ಕೆ ಕೇರಳದ ಪೋಲಿಸರು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *