ಮಡಿಕೇರಿ: ಬಲೂನ್‌ನೊಂದಿಗೆ (Balloon) ಆಟವಾಡುತ್ತಿದ್ದ ಸಂದರ್ಭ ಮಗುವೊಂದು (Child) ಆಕಸ್ಮಿಕವಾಗಿ ಬಾವಿಗೆ (Well) ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿ ರೋಶನ್ ಅವರ ಪುತ್ರಿ ಸಿಯಾನ್(3) ಮೃತಪಟ್ಟ ಬಾಲಕಿ. ಬುಧವಾರ ಮಧ್ಯಾಹ್ನ ರೋಶನ್ ವೋಟ್ ಮಾಡಲು ಮತದಾನ ಕೇಂದ್ರಕ್ಕೆ ತೆರಳಿದ್ದರು. ಮಗುವಿನ ತಾಯಿ ಹಾಗೂ ಅಜ್ಜಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯ ಮುಖ್ಯ ದ್ವಾರವನ್ನು ತೆರೆದಿಡಲಾಗಿತ್ತು. ಈ ವೇಳೆ ಮಗು ಬಲೂನ್‌ನೊಂದಿಗೆ ಆಟವಾಡುತ್ತಾ ಮನೆಯಿಂದ ಆಚೆ ಹೋಗಿದೆ.
ಕಂದಮ್ಮ ಆಟವಾಡುತ್ತಿದ್ದಾಗ ಬಲೂನು ಬಾವಿಯೊಳಗೆ ಬಿದ್ದಿದೆ. ಅದನ್ನು ಹೊರಗೆ ತೆಗೆಯುವ ಪ್ರಯತ್ನದಲ್ಲಿದ್ದ ಮಗು ಬಾವಿಗೆ ಇಣುಕಿ ನೋಡಿದ್ದು, ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದೆ. ಇದನ್ನೂ ಓದಿ: 35 ಕಿ.ಮೀ ದೂರದ ಆಸ್ಪತ್ರೆಗೆ 15 ನಿಮಿಷದಲ್ಲಿ ರಕ್ತ ರವಾನೆ ಮಾಡಿದ ಡ್ರೋನ್
ಪಾಲಕರು ಮನೆಯೊಳಗೆ ಇದ್ದುದರಿಂದ ಮಗು ಬಾವಿಯೊಳಗೆ ಬಿದ್ದ ವಿಷಯ ಯಾರಿಗೂ ತಿಳಿದಿರಲಿಲ್ಲ. ಸಂಜೆ ವೇಳೆ ಮನೆಯ ಸದಸ್ಯರೆಲ್ಲರೂ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಬಾವಿಯನ್ನು ಪರಿಶೀಲಿಸಿದಾಗ ಮಗು ಬಾವಿಗೆ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳ ಬಗ್ಗೆ ಗಮನಹರಿಸದೇ ತಮ್ಮ ಕೆಲಸಗಳಲ್ಲಿ ನಿರತರಾಗುವ ಪಾಲಕರಿಗೆ ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ ಬರ್ಬರ ಹತ್ಯೆ

 
			 
		 
		 
                                
                              
		