ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ

Public TV
2 Min Read

ಬೆಂಗಳೂರು: ನಾಡಿದ್ದು ಗುರುವಾರ ಮೈಕ್ರೋ ಫೈನಾನ್ಸ್ (Micro Finance) ಬಿಲ್ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕ್ಯಾಬಿನೆಟ್ ಅಜೆಂಡಾದಲ್ಲಿ ಸುಗ್ರೀವಾಜ್ಞೆ ವಿಷಯ ಸೇರ್ಪಡೆ ಮಾಡಿದೆ. ಕಾನೂನು ಇಲಾಖೆಯಿಂದ ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಮತ್ತು ಲೇವಾದೇವಿ ನಿಯಂತ್ರಣ 2025ರ ಕರಡು ಬಿಲ್ ಸಿದ್ಧವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮೊದಲ ಆದ್ಯತಾ ವಿಷಯವಾಗಿ ಬಿಲ್ ಸುಗ್ರೀವಾಜ್ಞೆ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಈ‌ ಮೊದಲೇ ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿದಂತೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗರಿಷ್ಠ 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ ವಿಧಿಸಲು ಕರಡು ಬಿಲ್‌ನಲ್ಲಿ ಕಾನೂನು ಅಡಕವಾಗಿದೆ. ಅಷ್ಟೇ ಅಲ್ಲದೆ ನೋಂದಣಿ ಪ್ರಾಧಿಕಾರದ ಮೂಲಕ ಮೈಕ್ರೋ ಫೈನಾನ್ಸ್ ಕಡ್ಡಾಯ ನೋಂದಣಿ ರೂಲ್ಸ್ ತರುತ್ತಿದ್ದು, ಆರ್‌ಬಿಐ ರೂಲ್ಸ್ ಪ್ರಕಾರ ಸಾಲ‌ಮಿತಿ, ಬಡ್ಡಿ ಮಿತಿಗಳನ್ನ ಪಾಲಿಸಬೇಕೆಂಬ ಷರತ್ತು ಸುಗ್ರೀವಾಜ್ಞೆಯಲ್ಲಿ ಇದೆ ಎನ್ನಲಾಗಿದೆ. ಸಾಲ ವಸೂಲಾತಿಗೂ ಕಠಿಣ ಷರತ್ತುಗಳನ್ನು ಹಾಕಲಾಗ್ತಿದ್ದು, ಕಿರುಕುಳಕ್ಕೆ ಮುಲಾಜಿಲ್ಲದೇ ಕ್ರಮಕ್ಕೆ ಸುಗ್ರೀವಾಜ್ಞೆ ತರಲಾಗ್ತಿದೆ. ಜ.30, ಗುರುವಾರ ಸುಗ್ರೀವಾಜ್ಞೆ ತರುತ್ತಿದ್ದು, ಕರಡು ಬಿಲ್ ಬಗ್ಗೆ ಚರ್ಚಿಸಿ ಕೆಲ ಸಣ್ಣಪುಟ್ಟ ಮಾರ್ಪಾಡುಗಳನ್ನೂ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮೈಕ್ರೋ ಫೈನಾನ್ಸ್ ಬಿಲ್ ಸುಗ್ರೀವಾಜ್ಞೆಯಲ್ಲಿ ಏನಿರಬಹುದು?
* ಸಾಲಗಾರರಿಗೆ ಕಿರುಕುಳ ಕೊಟ್ಟರೆ ಮೂರು ವರ್ಷ ಜೈಲು
* ಒಂದು ಲಕ್ಷದ ವರೆಗೆ ದಂಡ ವಿಧಿಸಲು ಪ್ಲ್ಯಾನ್
* ಮಸೂದೆಯ ಪ್ರಕಾರ ಫೈನಾನ್ಸ್ ಕಂಪನಿ ಕಡ್ಡಾಯವಾಗಿ ನೋಂದಣಿ ಪ್ರಾಧಿಕಾರದ ಮೂಲಕ ನೋಂದಣಿ ಆಗಬೇಕು
* ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲು ಮಾತ್ರ ಅನುಮತಿ, ನವೀಕರಣ ಮುಗಿದ 60 ದಿನಗಳಲ್ಲಿ ಮರು ನವೀಕರಣ ಮಾಡಿಕೊಳ್ಳಲು ಅವಕಾಶ
* ಮೈಕ್ರೋ ಫೈನಾನ್ಸ್ ಕಂಪನಿಗಳು ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಡಬೇಕು
* ಒಬ್ಬ ಸಾಲಗಾರ ಎರಡು ಸಂಸ್ಥೆಗಳಿಂದ ಮಾತ್ರ ಸಾಲ ಪಡೆಯಬಹುದು
* ಒಬ್ಬ ಸಾಲಗಾರನಿಗೆ ಒಟ್ಟು ಸಾಲದ ಮೊತ್ತ ಎರಡು ಲಕ್ಷ ಮೀರುವಂತಿಲ್ಲ
* ಸಾಲಗರನ ಆದಾಯ ಗಮನಿಸಬೇಕು, ಕೆವೈಸಿ‌ ಕಡ್ಡಾಯ
* ಆರ್‌ಬಿಐ ರೂಲ್ಸ್‌ಗಳನ್ನ ಕಡ್ಡಾಯವಾಗಿ ಪಾಲಿಸಬೇಕು
* ಬಡ್ಡಿ ದರದ ಸಹಿತ ಸಾಲದ ಮಂಜೂರಾತಿ ಕಾರ್ಡ್ ಅಥವಾ ಮಂಜೂರಾತಿ ಪತ್ರ ಕಡ್ಡಾಯ
* ಸಾಲ ವಸೂಲಾತಿ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು

Share This Article