ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ – ಬಂಗ್ಲೆ ಗುಡ್ಡ ಕಾಡಿನಲ್ಲಿ 3 ಅಸ್ಥಿಪಂಜರ ಪತ್ತೆ

Public TV
2 Min Read

ಮಂಗಳೂರು/ಬೆಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ (Dharmasthala Mass Burial Case) ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಪ್ರಕರಣದ ಸೂತ್ರಧಾರಿಗಳು ಅಂತ ಕರೆಸಿಕೊಂಡವರನ್ನು ಎಸ್‌ಐಟಿ ವಿಚಾರಣೆ ಮಾಡಿ ಕಳುಹಿಸುತ್ತಿದೆ. ಈ ನಡುವೆ ಬಂಗ್ಲೆ ಗುಡ್ಡ ಕಾಡಿನಲ್ಲಿ ಮೂರು ಅಸ್ಥಿಪಂಜರ ಪತ್ತೆಯಾಗಿದ್ದು, ಎಸ್‌ಐಟಿ ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಿದೆ.

ಬಂಗ್ಲೆ ಗುಡ್ಡ ಕಾಡಿನಲ್ಲಿ (Bangle Gudda Forest) ಮಾನವನ ಬುರುಡೆಗಳು ಪತ್ತೆಯಾಗಿವೆ. ಮೂರು ಬುರುಡೆಗಳಲ್ಲಿ 1 ಗಂಡಸಿನ ಬುರುಡೆ ಅನ್ನೋದು ಖಾತ್ರಿಯಾಗಿದೆ. ಆದಾಗ್ಯೂ ಮೂರು ಬುರುಡೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳಿಸಿ ಖಚಿತಪಡಿಸಿಕೊಳ್ಳಲು ಎಸ್‌ಐಟಿ ಸಿದ್ಧತೆ ನಡೆದಿದೆ. ಮೂರು ಬುರುಡೆಗಳು ಭೂಮಿಯ ಮೇಲ್ಪದರದಲ್ಲೇ ಪತ್ತೆಯಾದ ಕಾರಣ, ಎಸ್‌ಐಟಿ ತನಿಖೆಯನ್ನ ಇನ್ನಷ್ಟು ತೀವ್ರಗೊಳಿಸಿದೆ. ಇದನ್ನೂ ಓದಿ: ನಮ್ಮ ಮೇಲೆ ಬಂದಿರುವ ಅಪವಾದಗಳು ಓಡಿ ಹೋಗುತ್ತವೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಇಂದು ಮತ್ತೆ ಜಯಂತ್ & ಮಟ್ಟಣ್ಣನವರ್ ವಿಚಾರಣೆ
ಇನ್ನೂ ಪ್ರಕರಣದ ಆರಂಭದಲ್ಲಿ ಚಿನ್ನಯ್ಯ ತಂದ ಬುರುಡೆ ಎಲ್ಲಿಂದ ತಂದ ಎಂಬ ಪ್ರಶ್ನೆಗೆ ಇದೀಗ ಎಸ್‌ಐಟಿ ಉತ್ತರ ಕಂಡುಹಿಡಿದಿದೆ. ಬಂಗ್ಲೆ ಗುಡ್ಡ ಕಾಡಿನಿಂದಲೇ ಚಿನ್ನಯ್ಯ ಬುರುಡೆ ತಂದಿದ್ದು ಅದಕ್ಕೆ ಸಾಕ್ಷಿ ನಾನೇ ಅಂತಾ ವಿಠಲಗೌಡ ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆ ಎಸ್‌ಐಟಿ ಮತ್ತೆ ವಿಠಲಗೌಡನನ್ನು ಕರೆದೊಯ್ದು ಬಂಗ್ಲೆ ಗುಡ್ಡ ಕಾಡಿನಲ್ಲಿ ಮಹಜರು ನಡೆಸಿತ್ತು. ಪ್ರಕರಣದ ಸೂತ್ರಧಾರಿಗಳು ಅಂತ ಕರೆಸಿಕೊಂಡವರ ವಿಚಾರಣೆಯನ್ನ ಎಸ್‌ಐಟಿ ತೀವ್ರಗೊಳಿಸಿದೆ. ಆದ್ರೆ ಯಾರ ಮೇಲೂ ಎಸ್‌ಐಟಿಗೆ ಪ್ರಬಲ ಸಾಕ್ಷ್ಯ ಲಭ್ಯವಾಗುತ್ತಿಲ್ಲ.

ಇನ್ನು ಇಂದು ಸಹ ಜಯಂತ್ ಮತ್ತು ಗಿರೀಶ್ ಮಟ್ಟಣ್ಣನವರ್ (Girish Mattannavar) ವಿಚಾರಣೆ ನಡೆಯಲಿದೆ. ನಿನ್ನೆ ವಿಚಾರಣೆ ಮುಗಿಸಿ ಹೊರಟ ವೇಳೆ ಮಾತಾಡಿದ ಜಯಂತ್, ನನಗೆ ಎಸ್‌ಐಟಿ ಹೊಡೆದಿಲ್ಲ. ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಕಾನೂನು ವಿಚಾರದಲ್ಲಿ ನಾನು ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆ ಅನುಭವಿಸೋಕೆ ತಯಾರಿದ್ದೇನೆ. ತನಿಖೆಯಲ್ಲಿ ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಹೆಣಗಳ ರಾಶಿಯೇ ಸಿಕ್ಕಿದೆ: ವಿಠಲ ಗೌಡ ಸ್ಫೋಟಕ ಹೇಳಿಕೆ

ವಿಡಿಯೋ ರಿಲೀಸ್ ಮಾಡಿ ಸೌಜನ್ಯ ಮಾವ ಸ್ಫೋಟಕ ಹೇಳಿಕೆ
ಇನ್ನೂ ಬುರುಡೆ ಕೇಸ್‌ಗೆ ಸೌಜನ್ಯ ಮಾವ ವಿಠಲ್‌ಗೌಡ ಸ್ಫೋಟಕ ತಿರುವು ಕೊಟ್ಟಿದ್ದಾರೆ. ಬಂಗ್ಲೆ ಗುಡ್ಡಕ್ಕೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದ ವೇಳೆ ಹೆಣಗಳ ರಾಶಿ ಸಿಕ್ಕಿದೆ. ಮೂರು ಮನುಷ್ಯರ ಕಳೆಬರಹ ಸಿಕ್ಕಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ ಸುಮಂತ್ ವಿರುದ್ಧ ದೂರು; ಹಣ ಪಡೆದಿದ್ದರೆ ಸಾಬೀತು ಮಾಡಲಿ – ಯೂಟ್ಯೂಬರ್ ಅಭಿಷೇಕ್ ಸವಾಲು

Share This Article