3 ಪುಟಗಳ ಡೆತ್‌ನೋಟ್‌ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

1 Min Read

ಗಾಂಧೀನಗರ: ಕ್ರೆಡಿಟ್‌ ಕಾರ್ಡ್‌ ವಂಚನೆ ಮತ್ತು ನಿರಂತರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೂರತ್‌ನಲ್ಲಿ ನಡೆದಿದೆ. ಮೂವರ ಸಾವಿಗೆ ಕಾರಣನಾದ ಆರೋಪಿಯನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಲ್ಮುಕುಂದ್‌ ಖೇತಾನ್‌, ಅವರ ಪತ್ನಿ ಪ್ರಿಯಾಂಕಾ ಮತ್ತು ಹಿರಿಯ ಮಗಳು ಭವ್ಯಾ ಮೃತ ದುರ್ದೈವಿಗಳು. ದಂಪತಿಯ ಕಿರಿಯ ಮಗಳು ಪೃಥ್ವಿ ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಲ್ಮುಕುಂದ್ ಖೇತಾನ್ ಮತ್ತು ಅವರ ಕುಟುಂಬದವರ ಸಾವಿನ ತನಿಖೆಯಲ್ಲಿ ಆರ್ಥಿಕ ದುರುಪಯೋಗದ ಜಾಡು ಬಯಲಾಗಿದೆ. ಹಿಂದಿಯಲ್ಲಿ ಬರೆದಿರುವ ಮೂರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ, ವೈಭವ್‌ ರುಂಗ್ತಾ ಎಂಬಾತ ಖೇತಾನ್ ಅವರ ಕ್ರೆಡಿಟ್ ಕಾರ್ಡ್‌ಗಳನ್ನು ಹೇಗೆ ದುರುಪಯೋಗಪಡಿಸಿಕೊಂಡಿದ್ದಾನೆ ಎಂಬುದನ್ನು ಮೃತರು ಬಹಿರಂಗಪಡಿಸಿದ್ದಾರೆ. ಬಿಹಾರದ ಮೂಲದ ಸ್ಟಾಕ್ ಮಾರುಕಟ್ಟೆ ವೃತ್ತಿಪರ ಖೇತಾನ್ ತನ್ನ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಅವರಿಗೆ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಲಾಗಿತ್ತು. ನಿರಂತರ ಮಾನಸಿಕ ಮತ್ತು ಆರ್ಥಿಕ ಒತ್ತಡದಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕಿ ದುರಂತ ಸಾವುಕಂಡಿದೆ ಎನ್ನಲಾಗಿದೆ.

ಕುಟುಂಬದ ಕಿರಿಯ ಮಗಳು ಬದುಕುಳಿದ ಏಕೈಕ ವ್ಯಕ್ತಿ. 7 ವರ್ಷದ ಪೃಥ್ವಿ ಕೂಡ ಪ್ರಕರಣದ ಬಗ್ಗೆ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾಳೆ. ತನ್ನ ಪೋಷಕರು ತನಗೆ ವಿಷಾಹಾರ ನೀಡಿದ್ದ ಬಗ್ಗೆ ತಿಳಿಸಿದ್ದಾರೆ. ದಂಪತಿ ಮೊದಲು ಮಕ್ಕಳಿಗೆ ವಿಷಾಹಾರ ನೀಡಿ ನಂತರ ತಾವು ಸೇವಿಸಿದ್ದರು. ಬಳಿಕ ಬಲ್ಮುಕುಂದ್ ಅವರ ಪತ್ನಿ ಪ್ರಿಯಾಂಕಾ ತಮ್ಮ ತಂದೆಗೆ ಕರೆ ಮಾಡಿ ತಾವು ವಿಷ ಸೇವಿಸಿರುವುದಾಗಿ ತಿಳಿಸಿದ್ದಾರೆ. ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೂವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪ್ರಕರಣದ ಆರೋಪಿ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Share This Article