ಆಂಧ್ರದಲ್ಲಿ ಮತ್ತೊಂದು ಬಸ್ ದುರಂತ – ಮೂವರು ಸಜೀವ ದಹನ; ಬಸ್‌, ಕಂಟೈನರ್‌ ಧಗಧಗ

2 Min Read

– ಪ್ರಯಾಣಿಕರ ಜೀವ ಉಳಿಸಿದ ಚಾಲಕ ಸಾವು

ಅಮರಾವತಿ: ಕೆಲ ದಿನಗಳ ಹಿಂದೆಯಷ್ಟೇ ಕರ್ನೂಲ್‌ ಬಳಿ ಸಂಭವಿಸಿದ ಬಸ್‌ ದುರಂತದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೊಂದು ಘಟನೆಯಲ್ಲಿ ಮೂವರು ಸಜೀವ ದಹನವಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಟಯರ್‌ ಸ್ಫೋಟಗೊಂಡು ನಿಯಂತ್ರಣ ಕಳೆದುಕೊಂಡ ಬಸ್‌ ಕಂಟೈನರ್‌ ಲಾರಿಗೆ (Container Lorry) ಡಿಕ್ಕಿ ಹೊಡೆದು ಧಗಧಗನೆ ಹೊತ್ತಿ ಉರಿದ ಘಟನೆ ಗುರುವಾರ (ಇಂದು) ನಂದ್ಯಾಲ್‌ (Nandyal) ಜಿಲ್ಲೆಯಲ್ಲಿ ನಡೆದಿದೆ. ನಸುಕಿನ ಜಾವ 1:30 ರ ಸುಮಾರಿಗೆ ಸಂಭವಿಸಿದ್ದು, ದುರಂತದಲ್ಲಿ ಬಸ್‌ ಚಾಲಕ, ಕಂಟೈನರ್‌ ಚಾಲಕ ಹಾಗೂ ಲಾರಿ ಕ್ಲೀನರ್‌ ಸೇರಿ ಮೂವರು ಸಜೀವ ದಹನವಾಗಿದ್ದಾರೆ.

ಅಪಘಾತಕ್ಕೀಡಾದ (Accident) ಖಾಸಗಿ ಬಸ್‌ ಆಂಧ್ರದ ನೆಲ್ಲೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಬಲಭಾಗದ ಟೈಯರ್‌ ಸ್ಫೋಟಗೊಂಡಿದೆ. ಹಠಾತ್‌ ಸ್ಫೋಟದಿಂದ ಬಸ್‌ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್‌ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ಈ ಕಂಟೈನರ್‌ ಬೈಕ್‌ಗಳನ್ನ ಸಾಗಿಸುತ್ತಿತ್ತು. ಇದನ್ನೂ ಓದಿ: Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

ಘಟನೆಯಲ್ಲಿ ಬಸ್‌ ಮತ್ತು ಕಂಟೈನರ್‌ ಎರಡೂ ಹೊತ್ತಿ ಬೆಂಕಿಗಾಹುತಿಯಾಗಿವೆ. ಬೆಂಕಿ ಕೆನ್ನಾಲಿಗೆ ವ್ಯಾಪಿಸುತ್ತಿದ್ದಂತೆ ಬಸ್‌ ಡ್ರೈವರ್‌, ಕಂಡಕ್ಟರ್‌ ಕಿಟಕಿ ಗಾಜುಗಳನ್ನ ಒಡೆದು ಪ್ರಯಾಣಿಕರನ್ನ ರಕ್ಷಿಸಲು ಮುಂದಾಗಿದ್ದಾರೆ. ಸ್ಥಳೀಯ ನಿವಾಸಿಗಳೂ ನೆರವಿಗೆ ಧಾವಿಸಿದ್ದಾರೆ. ಕೂಡಲೇ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಾಗಲೇ ಬಸ್‌, ಕಂಟೈನರ್‌ನಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿದ್ದವು. ಈ ವೇಳೆ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಮೂವರು ಸಾವನ್ನಪ್ಪಿದ್ದು ಉಳಿದ 36 ಪ್ರಯಾಣಿಕರು ಸೇಫಾಗಿದ್ದಾರೆ, ಗಾಯಾಳುಗಳನ್ನ ನಂದ್ಯಾಲ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟೈರ್‌ ಸಿಡಿದ ಬಳಿಕ ಬಸ್‌ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ, ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಂತ್ಯವಲ್ಲ… ದುರಂತದ ಕಥೆಗಳು – ಭಾರತ ಕಂಡ 2025ರ ಮಹಾದುರ್ಘಟನೆಗಳು

Share This Article