ಬಜೆಟ್‍ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ

Public TV
2 Min Read

ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಾಜ್ಯ ಬಜೆಟ್ ಗುರುವಾರ ಮಂಡನೆಯಾಗಿದ್ದು, ಎಚ್‍ಡಿಕೆ ಬಜೆಟ್‍ನಲ್ಲಿ ಪ್ರಾದೇಶಿಕ ಅಸಮತೋಲನ ಹಾಗೂ ಕರಾವಳಿಗೆ ಬಿಡಿಗಾಸು ನೀಡದಿದ್ದರಿಂದ ಕರಾವಳಿ ಭಾಗದ ಬಿಜೆಪಿ ಶಾಸಕರು ಸಿಡಿದೆದ್ದಿದ್ದಾರೆ.

ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಶಾಸಕರು ಕಪ್ಪುಪಟ್ಟಿ ಧರಿಸಿ ದೋಸ್ತಿ ಸರ್ಕಾರದ ಬಜೆಟ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ತಾಯಿ ಸ್ಥಾನದಲ್ಲಿ ಇರುವಂತೆ ಸರ್ಕಾರ ಇದೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ರು. ಆದ್ರೆ ಕರಾವಳಿ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಿದ್ರು. ಮೀನುಗಾರರ ರಕ್ಷಣೆಗೆ ಸರ್ಕಾರ ಅನುದಾನ ನೀಡಿಲ್ಲ. ವರಹಾ ಯೋಜನೆಗೆ ಹಣ ನೀಡಿಲ್ಲ. ಪಶ್ಚಿಮ ವಾಹಿನಿ ಯೋಜನೆಗೆ ಅನುದಾನ ನೀಡಿಲ್ಲ. ವಿದ್ಯುತ್, ಪೆಟ್ರೋಲ್ ದರ ಏರಿಸಿದ್ರು. ಸಿಎಂ ಕುಮಾರಸ್ವಾಮಿ ಕೇವಲ 37 ಶಾಸಕರಿಗೆ ಮಾತ್ರ ಬಜೆಟ್ ನೀಡಿದ್ದಾರೆ ಅಂತ ಕೋಟಾ ಗರಂ ಆದ್ರು.

ಬಜೆಟ್ ಉತ್ತರ ವೇಳೆ ಕರಾವಳಿ ಕರ್ನಾಟಕ ಭಾಗಕ್ಕೆ ಅನುದಾನ ನೀಡಲೇಬೇಕು. ಇಲ್ಲದಿದ್ದಲ್ಲಿ ಸದನದ ಒಳಗೆ- ಹೊರಗೆ ಹಾಗೂ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಅಂತ ಅವರು ತಮ್ಮ ಆಕ್ರೋಶ ಹೊರಹಾಕಿ ಎಚ್ಚರಿಸಿದ್ದಾರೆ.

ಇದೇ ವೇಳೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಿಎಂ ನಿನ್ನೆ ನೀಡಿದ ಬಜೆಟ್ ಕೇವಲ ರಾಮನಗರ, ಹಾಸನದ ಜಿಲ್ಲಾ ಪಂಚಾಯ್ತಿ ಬಜೆಟ್. ಉಡುಪಿ, ದಕ್ಷಿಣ ಕನ್ನಡದ ಜನತೆಯ ಹಿತವನ್ನು ಸರ್ಕಾರ ಕಾಯಲಿಲ್ಲ. ನಮ್ಮ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಮೆಡಿಕಲ್ ಕಾಲೇಜ್ ನೀಡುವಂತೆ ಮನವಿ ಮಾಡಿದ್ವಿ. ಆದ್ರೆ ಕರಾವಳಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಮತ ನೀಡಿಲ್ಲ ಅಂತ ಬಜೆಟ್ ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ಬಿಡೋದಿಲ್ಲ. ಈ ಬಜೆಟ್ ನಾವು ಒಪ್ಪಲು ರೆಡಿ ಇಲ್ಲ ಅಂತ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ದೇವಸ್ಥಾನ ಕೇವಲ ಅಡ್ಡ ಬೀಳಲು ಇರೋದಲ್ಲ. ನಿಮಗೆ ನಮಸ್ಯೆ ಆದಾಗ ದೇವರ ದರ್ಶನಕ್ಕೆ ನಮ್ಮ ಜಿಲ್ಲೆಗೆ ಬರ್ತಿರಾ. ಆದ್ರೆ ಅಭಿವೃದ್ಧಿಗೆ ಅನುದಾನ ನೀಡಲು ಯಾಕೆ ಹಿಂದೇಟು ಹಾಕಿದ್ದೀರಾ. ಸರ್ಕಾರ ಬಜೆಟ್ ಉತ್ತರದಲ್ಲಿ ಕರಾವಳಿ ಭಾಗಕ್ಕೆ ಒತ್ತು ನೀಡಬೇಕು. ನಮ್ಮ ಬೇಡಿಕೆ ಈಡೇರಿಸದೇ ಇದ್ರೆ ಕರಾವಳಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *