ಜಾಮಾ ಮಸೀದಿ ಸರ್ವೇಗೆ ವಿರೋಧ – ಹಿಂಸಾಚಾರದಲ್ಲಿ ಮೂವರು ಸಾವು, 20 ಪೊಲೀಸರಿಗೆ ಗಾಯ

Public TV
1 Min Read

– ಮಸೀದಿ ಜಾಗದಲ್ಲಿ ಹಿಂದೂ ದೇವಾಲಯವಿತ್ತೆ ಎಂದು ಸರ್ವೇ

ಲಕ್ನೋ: ಮೊಘಲರ ಕಾಲದ ಜಾಮಾ ಮಸೀದಿ ಸರ್ವೇಗೆ ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದು, 20 ಪೊಲೀಸರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಸಂಭಾಲ್‌ನಲ್ಲಿ ನಡೆದಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಸರ್ವೇ ತಂಡ ಮಸೀದಿ ಬಳಿ ಆಗಮಿಸಿತ್ತು. ಇದು, ಸ್ಥಳೀಯರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.

ಅಡ್ವೋಕೇಟ್ ಕಮಿಷನರ್ ನೇತೃತ್ವದ ಸಮೀಕ್ಷಾ ತಂಡವು ಸರ್ವೇ ಕೆಲಸ ಪ್ರಾರಂಭಿಸುತ್ತಿದ್ದಂತೆ ಮಸೀದಿಯ ಬಳಿ ಗುಂಪು ಜಮಾಯಿಸಿದಾಗ ಹಿಂಸಾಚಾರ ನಡೆಯಿತು. ಪೊಲೀಸರು ಮಸೀದಿಗೆ ಪ್ರವೇಶಿಸದಂತೆ ತಡೆಯಲು ಜನರು ಪ್ರಯತ್ನಿಸಿದರು.

ಗುಂಪಿನಲ್ಲಿದ್ದ ಕೆಲವು ವ್ಯಕ್ತಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿದರು. ಗುಂಪು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದೆ. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ನಯೀಮ್, ಬಿಲಾಲ್ ಮತ್ತು ನೌಮನ್ ಮೃತರು ಎಂದು ಗುರುತಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಯ ಗನ್ನರ್ ಸೇರಿದಂತೆ ಕೆಲವು ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಸೀದಿಯು ಈಗ ಇರುವ ಸ್ಥಳದಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು. ಮಸೀದಿ ಸರ್ವೇ ನಡೆಸುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಸರ್ವೇಗೆ ಅನುಮತಿ ನೀಡಿತು. ಮಂಗಳವಾರವೂ ಇದೇ ಸಮೀಕ್ಷೆ ನಡೆದಿರುವುದರಿಂದ ಸಂಭಾಲ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Share This Article