ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ

Public TV
1 Min Read

ಮುಂಬೈ: ರಾಸಾಯನಿಕ ಕಾರ್ಖಾನೆಯಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 3 ಜನರು ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಲ್‍ಘರ್ ನಲ್ಲಿ ನಡೆದಿದೆ.

ಗುರುವಾರ ರಾತ್ರಿ ಸುಮಾರು 11.15ಕ್ಕೆ ಬೋಯಿಸರ್ ರಾಸಾಯನಿಕ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಸುತ್ತ-ಮುತ್ತ ಇದ್ದ ಪ್ರದಶಕ್ಕೆಲ್ಲಾ ಭುಕಂಪನದ ಅನುಭವದಂತೆ ನಡುಕ ಹುಟ್ಟಿಸಿತ್ತು. ಇದರಿಂದ ಮನೆಯಲ್ಲಿದ್ದ ಜನರೆಲ್ಲಾ ಭುಕಂಪನವಾಯಿತೆಂದು ಮನೆಯಿಂದ ಹೊರ ಬಂದು ಕುಳಿತಿದ್ದರು. ಸ್ಫೋಟದ ತೀವ್ರತೆಗೆ ಕೆಲವು ಮನೆಗಳ ಕಿಟಿಕಿಯ ಗಾಜುಗಳು ಪುಡಿಯಾಗಿದ್ದು, ಎಲ್ಲರನ್ನು ಆತಂಕಕ್ಕೆ ಎಡೆಮಾಡಿತ್ತು. ಫ್ಯಾಕ್ಟರಿಯ ಬಾಯ್ಲರ್ ರೂಮಿನಲ್ಲಿ ಸ್ಫೋಟ ನಡೆದಿರುವ ಸಾಧ್ಯತೆ ಇದೆ. ಆದರೂ ಸ್ಫೋಟಕ್ಕೆ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿದ 25 ದಕ್ಕೂ ಹೆಚ್ಚು ಅಗ್ನಿಶಾಮಕ ಪಡೆಗಳು ಹೊತ್ತಿ ಉರಿಯುತ್ತಿದ್ದ ಕಾರ್ಖಾನೆಯ ಬೆಂಕಿಯನ್ನ ನಂದಿಸಲು ಹರಸಾಹಸ ಪಡಬೇಕಾಯಿತು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಯಾರೋ ಬಾಂಬ್ ದಾಳಿ ನಡೆಸಿರುವ ಹಾಗೆ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಮುಂಜಾಗ್ರತೆಯ ಕ್ರಮವಾಗಿ ಆ ಮಾರ್ಗದ ರಸ್ತೆ ಸಂಚಾರವನ್ನ ಸ್ಥಗಿತಗೊಳಿಸಿದ್ದು, ಪ್ರದೇಶದ ವಿದ್ಯುತ್ ಪೂರೈಕೆಯನ್ನ ಸ್ಥಗಿತಗೊಳಿಸಲಾಗಿದೆ. ಈ ಅವಘಡ ನಡೆದ ಪ್ರದೇಶದ ನಾಲ್ಕು ರಾಸಾಯನಿಕ ಕೇಂದ್ರಗಳಾದ- ಪ್ರಾಚಿ ಇಂಡಸ್ಟ್ರಿ, ಭಾರತ್ ರಾಸಾಯನ್, ಆರತಿ ಇಂಡಸ್ಟ್ರಿ ಮತ್ತು ಯುನಿಮಾಕ್ಸ್ ಕಾರ್ಖಾನೆಗಳಿಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಪಿ ಸಿಂಗ್, ವಾಸೈನ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ (ಡಿಐಎಸ್‍ಎಚ್) ನಿರ್ದೇಶಕರು ಈ ಅವಘಡದ ಕಾರಣವನ್ನ ಖಚಿತಪಡಿಸಿಕೊಂಡು ಬೋಯಿಸಾರ್ ಪೊಲೀಸರಿಗೆ ವರದಿ ಮಾಡುವುದಾಗಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *