ಶ್ರೀನಗರ: ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಹುತಾತ್ಮರಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಸಂತ್‌ಗಢದ (Basantgarh) ಕಾಂಡ್ವಾ (Kadwa) ಬಳಿ ನಡೆದಿದೆ.
ಗುರುವಾರ ಬೆಳಗ್ಗೆ 10:30ರ ಸುಮಾರಿಗೆ ಬಸಂತ್‌ಗಢದಿಂದ ಕಾರ್ಯಾಚರಣೆ ಮುಗಿಸಿ ಸಿಬ್ಬಂದಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. 187ನೇ ಬೆಟಾಲಿಯನ್‌ಗೆ ಸೇರಿದ ವಾಹನದಲ್ಲಿ 23 ಸಿಬ್ಬಂದಿ ಇದ್ದರು. ಇದನ್ನೂ ಓದಿ: ಸುಧಾಕರ್ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ – ರಾಜಕೀಯ ಒತ್ತಡ ಇಲ್ಲದೆ ತನಿಖೆ: ಎಂ.ಸಿ ಸುಧಾಕರ್
ಅಪಘಾತದಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದು 16 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಎಂದು ಹೆಚ್ಚುವರಿ ಎಸ್‌ಪಿ ಉಧಂಪುರ ಸಂದೀಪ್ ಭಟ್ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಿಆರ್‌ಪಿಎಫ್ ಸಿಬ್ಬಂದಿಯ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. ಎಲ್‌ಜಿ ಕಚೇರಿಯ ಎಕ್ಸ್ ಪೋಸ್ಟ್‌ನಲ್ಲಿ, ಉಧಮ್‌ಪುರ ಬಳಿ ಅಪಘಾತದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯ ಸಾವಿನಿಂದ ದುಃಖಿತನಾಗಿದ್ದೇನೆ. ರಾಷ್ಟ್ರಕ್ಕೆ ಅವರ ಅನುಕರಣೀಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಹುತಾತ್ಮರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಅಲ್ಲದೇ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಾಧ್ಯವಾದಷ್ಟು ಉತ್ತಮ ಆರೈಕೆ ಮತ್ತು ಸಹಾಯವನ್ನು ಖಚಿತಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾಂಡ್ವಾ-ಬಸಂತ್‌ಗಢ ಪ್ರದೇಶದಲ್ಲಿ ಸಿಆರ್‌ಪಿಎಫ್ ವಾಹನಕ್ಕೆ ಅಪಘಾತ ಸಂಭವಿಸಿದ ಸುದ್ದಿ ಕೇಳಿ ಬೇಸರವಾಯಿತು. ವಾಹನದಲ್ಲಿ ಹಲವಾರು ಧೈರ್ಯಶಾಲಿ ಸಿಆರ್‌ಪಿಎಫ್ ಯೋಧರು ಇದ್ದರು. ನಾನು ಇದೀಗ ಜಿಲ್ಲಾಧಿಕಾರಿ ಸಲೋನಿ ರೈ ಅವರೊಂದಿಗೆ ಮಾತನಾಡಿದ್ದೇನೆ, ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ನನಗೆ ಮಾಹಿತಿ ನೀಡುತ್ತಿದ್ದಾರೆ. ರಕ್ಷಣಾ ಕ್ರಮಗಳನ್ನು ತಕ್ಷಣವೇ ಪ್ರಾರಂಭಿಸಲಾಗಿದೆ. ಸ್ಥಳೀಯರು ಸ್ವಯಂಪ್ರೇರಣೆಯಿಂದ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.