ಪಶುವೈದ್ಯೆ ರೇಪ್, ಕೊಲೆ ಪ್ರಕರಣ- ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಅಮಾನತು

Public TV
4 Min Read

– ದೂರು ಕೊಡಲು ಹೋದ ತಂದೆಯನ್ನು ಅಲೆದಾಡಿಸಿದ ಪೊಲೀಸರು

ಹೈದರಾಬಾದ್: ತೆಲಂಗಾಣ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಮೊದಲು ಪ್ರಿಯಾಂಕಾ ಅವರು ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ಕೊಡಲು ಹೋದಾಗ ಶಂಶಾಬಾದ್ ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದರು. ಪೋಷಕರು ನಾಪತ್ತೆ ದೂರು ನೀಡಲು ಹೋದಾಗ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅವರನ್ನು ಪೊಲೀಸರು ಅಲೆದಾಡಿಸಿದ್ದರು. ಒಂದು ವೇಳೆ ಪೊಲೀಸರು ನಿರ್ಲಕ್ಷ್ಯ ತೋರದೇ ತಮ್ಮ ಕೆಲಸ ಮಾಡಿದ್ದರೆ ಈ ಅನಾಹುತ ನಡೆಯುವುದನ್ನು ತಡೆಯಬಹುದಿತ್ತು ಎಂದು ಮಹಿಳಾ ರಾಷ್ಟ್ರೀಯ ಆಯೋಗ(ಎನ್‍ಡಬ್ಲುಸಿ) ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಮೆರೆದ ಶಂಶಾಬಾದ್ ಪೊಲೀಸ್ ಠಾಣೆಯ ಎಸ್‍ಐ ಎಂ. ರವಿ ಕುಮಾರ್, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಏರ್‌ಪೋರ್ಟ್‌ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ. ವೇಣುಗೋಪಾಲ್ ರೆಡ್ಡಿ ಹಾಗೂ ಎ. ಸತ್ಯನಾರಾಯಣ ಗೌಡ್ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

ಈ ಬಗ್ಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾದ ವಿ.ಸಿ ಸಜ್ಜನರ್ ಅವರು ಪ್ರತಿಕ್ರಿಯಿಸಿ, ಈಗಾಗಲೇ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದೇವೆ. ಮುಂದಿನ ಆದೇಶದವರೆಗೂ ಅವರು ಕೆಲಸಕ್ಕೆ ಬರುವಂತಿಲ್ಲ. ಪೊಲೀಸರು ಪ್ರಿಯಾಂಕ ನಾಪತ್ತೆ ದೂರು ದಾಖಲಿಸಿಕೊಳ್ಳಲು ಸಮಯ ಹಾಳು ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ತಂದೆ ಮಾತನಾಡಿ, ಪ್ರಿಯಾಂಕ ಬುಧವಾರ ರಾತ್ರಿ 9.15ಕ್ಕೆ ಸೋದರಿ ಜೊತೆ ಮಾತನಾಡಿದ್ದಳು. ಮತ್ತೆ ರಾತ್ರಿ 11 ಗಂಟೆಗೆ ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಇಲ್ಲದೆ ಫೋನ್ ಆಫ್ ಆಗಿರಬಹುದೆಂದು ತಿಳಿದು ಆಕೆಯನ್ನು ಹುಡುಕಿಕೊಂಡು ಟೋಲ್ ಪ್ಲಾಜಾ ಬಳಿ ನಾವು ಹೋದೆವು. ಆದರೆ ಅಲ್ಲಿ ಪ್ರಿಯಾಂಕ ಇರಲಿಲ್ಲ. ನಂತರ ಮಗಳು ಕಾಣೆಯಾದ ಬಗ್ಗೆ ದೂರು ನೀಡಲು ಶಂಶಾಬಾದ್ ಠಾಣೆಗೆ ಹೋದೆವು. ಆದರೆ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ನೆಪ ಹೇಳಿ, ಪೊಲೀಸರು ನಮ್ಮನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಿದರು. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

ಪೊಲೀಸರು ಈ ಪ್ರಕರಣ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನ ನಿರ್ಧರಿಸುವಲ್ಲೇ ಕಾಲ ಹರಣ ಮಾಡಿದರು. ಕೊನೆಗೆ ಇಬ್ಬರು ಕಾನ್‍ಸ್ಟೇಬಲ್‍ಗಳ ನೆರವು ಕೋರಿದೆವು. ಆದರು ಏನೂ ಪ್ರಯೋಜನವಾಗಲಿಲ್ಲ. ಮಗಳನ್ನು ಹುಡುಕಿಕೊಂಡು ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ನಾನೇ ಹೋದೆ ಎಂದು ತಂದೆ ಅಳಲನ್ನು ತೋಡಿಕೊಂಡರು.

26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್‍ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

ಮಗನ ಕೃತ್ಯಕ್ಕೆ ತಾಯಿ ಕಿಡಿ:
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಚೆನ್ನಕೇಶವುಲು ತಾಯಿ ಪ್ರತಿಕ್ರಿಯಿಸಿ, ಮಗನ ಅಮಾನುಷ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನನ್ನ ಮಗ ಈ ಪಾಪ ಮಾಡಿದ್ದಾನೆ ಎಂದು ಸಾಬೀತಾದರೆ ಖಂಡಿತಾ ಆತನಿಗೆ ಶಿಕ್ಷೆಯಾಗಬೇಕು. ಬೇಕಾದರೆ ಪ್ರಿಯಾಂಕ ರೆಡ್ಡಿಯನ್ನು ಹೇಗೆ ಆರೋಪಿಗಳು ಅಮಾನುಷವಾಗಿ ಕೊಲೆಗೈದಿದ್ದಾರೋ ಹಾಗೆಯೇ ನನ್ನ ಮಗನನ್ನೂ ಹತ್ಯೆ ಮಾಡಿ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

ನಾನು ಒಬ್ಬಳು ಹೆಣ್ಣು. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಹೀಗಾದರೆ ಹೆತ್ತ ಕರುಳು ಎಷ್ಟು ನೋವು ಪಡುತ್ತದೆ ಎಂದು ನನಗೂ ತಿಳಿದಿದೆ. ನನ್ನ ಮಗ ತಪ್ಪಿತಸ್ಥ ಆಗಿದ್ದರೆ ಆತನಿಗೆ ಶಿಕ್ಷೆ ಖಂಡಿತ ಆಗಬೇಕು. ಈ ರೀತಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹೀನಾಯ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಬೇಕು. ಆಗ ಮುಂದೆ ಇಂತಹ ದುಷ್ಕೃತ್ಯಕ್ಕೆ ಯಾರು ಕೈ ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹ:
ಈಗಾಗಲೇ ದೇಶಾದ್ಯಂತ ಈ ಪ್ರಕರಣ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಪ್ರಿಯಾಂಕ ರೆಡ್ಡಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಎಲ್ಲೆಡೆ ಕ್ಯಾಂಡಲ್ ಮಾರ್ಚ್, ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಬಿಸಿ ಮುಟ್ಟಿಸಿ ನಿಯಮ ಪಾಲಿಸುವಂತೆ ಸರ್ಕಾರ ಮಾಡಿದೆ. ಅದರಂತೆ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಿ, ಆಗ ಕಾಮುಕರ ಅಟ್ಟಹಾಸ ಅಂತ್ಯವಾಗುತ್ತದೆ. ಇಂಥವರಿಗೆ ಜೀವಾವಧಿ ಶಿಕ್ಷೆ ನೀಡರೆ ಆರಾಮಾಗಿ ಸಾಯುವ ತನಕ ಜೈಲಿನಲ್ಲಿ ಇರುತ್ತಾರೆ. ಅದರ ಬದಲು ಶಿಕ್ಷೆ ಸಾಬೀತಾದ ಕೂಡಲೇ ಗಲ್ಲಿಗೇರಿಸಿ ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *