3.2 ಶತಕೋಟಿ ಡಾಲರ್‌ ಯೋಜನೆಯೇ ಅಕ್ರಮ – ಚೀನಾಗೆ ಪೆಟ್ಟು ನೀಡಿದ ಕೀನ್ಯಾ

Public TV
2 Min Read

ನೈರೋಬಿ: ಒಂದೊಂದು ದೇಶದ ದೊಡ್ಡ ಯೋಜನೆಯನ್ನು ಎತ್ತಿಕೊಂಡು ನಿಧಾನವಾಗಿ ಆ ದೇಶವನ್ನೇ ತನ್ನ ಮಾರುಕಟ್ಟೆಯ ಕೇಂದ್ರವನ್ನಾಗಿ ಮಾಡುವ ಚೀನಾದ ತಂತ್ರಕ್ಕೆ ಕೀನ್ಯಾ ಈಗ ಬಲವಾದ ಪೆಟ್ಟು ನೀಡಿದೆ.

ಕೀನ್ಯಾದಲ್ಲಿ ಚೀನಾ ಆರಂಭಿಸಿದ್ದ 3.2 ಶತಕೋಟಿ ಡಾಲರ್‌ ಮೊತ್ತ ಯೋಜನೆ ಅಕ್ರಮ ಎಂದು ಮೇಲ್ಮನವಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಮೊಂಬಾಸ ಬಂದರುನಿಂದ ರಾಜಧಾನಿ ನೈರೋಬಿವರೆಗಿನ 440 ಕಿ.ಮೀ ಉದ್ದದ ರೈಲ್ವೇ ಯೋಜನೆಯ ಟೆಂಡರ್‌ ಅನ್ನು ಚೀನಾ ರೋಡ್‌ ಆಂಡ್‌ ಬ್ರಿಡ್ಜ್‌ ಕಾರ್ಪೋರೇಷನ್‌(ಸಿಆರ್‌ಬಿಸಿ) ಪಡೆದುಕೊಂಡಿತ್ತು.

2014ರಲ್ಲಿ ಈ ಯೋಜನೆ ಆರಂಭಿಸಿದಾಗ ಕೀನ್ಯಾದ ಹೋರಾಟಗಾರ ಒಕಿಯಾ ಎಂಬವರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರೈಲ್ವೇ ಜನರ ತೆರಿಗೆಯಿಂದ ನಡೆಯುತ್ತಿದೆ. ಹೀಗಾಗಿ ರೈಲ್ವೇ ಅಡಿಯಲ್ಲಿ ನಡೆಯುತ್ತಿರುವ ಯೋಜನೆಗಳು ಪಾರದರ್ಶಕವಾಗಿರಬೇಕು. ಆದರೆ ಈ ಟೆಂಡರ್‌ನಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಟೆಂಡರ್‌ ಕರೆಯದೇ ಏಕಪಕ್ಷೀಯವಾಗಿ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಯೋಜನೆಯಿಂದ ಕೀನ್ಯಾ ಪ್ರಜೆಗಳ ಮೇಲೆ ತೆರಿಗೆಯ ಭಾರ ಬೀಳಲಿದೆ ಎಂದು ವಾದಿಸಿದ್ದರು.

ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಒಕಿಯಾ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದು ಈಗ ಕೋರ್ಟ್‌ ಒಕಿಯಾ ಪರವಾಗಿ ತೀರ್ಪು ನೀಡಿ ಅಕ್ರಮ ಎಂದು ಹೇಳಿದೆ.

ಬಹುತೇಕ ಈ ಯೋಜನೆ ಪೂರ್ಣಗೊಂಡಿದ್ದು 2017ರಿಂದ ಪ್ರಯಾಣಿಕರ ರೈಲು ಮತ್ತು ಗೂಡ್ಸ್‌ ರೈಲುಗಳು ಸಂಚರಿಸುತ್ತಿವೆ. ಈ ಯೋಜನೆಗೆ ಚೀನಾದ ಎಕ್ಸಿಮ್‌ ಬ್ಯಾಂಕು ಸಾಲ ನೀಡಿದೆ.

ಕೀನ್ಯಾ ರೈಲ್ವೇ ಮತ್ತು ಚೀನಾದ ಸಿಆರ್‌ಬಿಸಿ ಕಂಪನಿ ಈ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು ಅಕ್ರಮ ನಡೆದಿಲ್ಲ ಎಂದು ಕೋರ್ಟ್‌ನಲ್ಲಿ ವಾದಿಸಿದೆ. ಮುಂದೆ ಈ ಯೋಜನೆ ಏನಾಗಬಹುದು ಎಂಬ ಕುತೂಹಲ ಎದ್ದಿದ್ದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.

ಕೋವಿಡ್‌ 19ನಿಂದಾಗಿ ಕೀನ್ಯಾದಲ್ಲಿ ಆರ್ಥಿಕ ಪರಿಸ್ಥಿತಿ ಭಾರೀ ಹದಗೆಟ್ಟಿದೆ. ಕೀನ್ಯಾ ಸರ್ಕಾರ ಸಾಲ ಪಾವತಿಸಲು ಹೆಣಗಾಡುತ್ತಿದ್ದು ಬಲವಂತವಾಗಿ ಟ್ರಕ್‌ ಮಾಲೀಕರು ಮತ್ತು ಆಮದುದಾರರು ಈ ರೈಲ್ವೇಯನ್ನು ಬಳಸಬೇಕು ಎಂದು ಸೂಚಿಸಿದೆ. ಆದರೆ ಈ ಟ್ರಕ್‌ನಲ್ಲಿ ವಸ್ತುಗಳನ್ನು ಸಾಗಾಣಿಕೆ ಮಾಡುವುದಕ್ಕಿಂತ ಈ ರೈಲು ಸೇವೆ ಭಾರೀ ದುಬಾರಿಯಾಗಿದೆ.

ಈ ತಿಂಗಳ ಆರಂಭದಲ್ಲಿ ಕೀನ್ಯಾದ ಸಂಸತ್ತು ಆಫ್ರಿಕಾ ಸ್ಟಾರ್‌ ರೈಲ್ವೇಗೆ 380 ದಶಲಕ್ಷ ಡಾಲರ್‌ ಆಡಳಿತ ಶುಲ್ಕ ಪಾವತಿಸಿಲ್ಲ ಎಂದು ಹೇಳಿತ್ತು. ಇದನ್ನೂ ಓದಿ: ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

ಚೀನಾದ ತಂತ್ರ ಏನು?
ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡರಾಷ್ಟ್ರಗಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಚೀನಾ ಆ ದೇಶಗಳಲ್ಲಿ ಭಾರೀ ಮೊತ್ತದ ಯೋಜನೆಗಳನ್ನು ಪಡೆದುಕೊಳ್ಳುತ್ತದೆ. ಒಂದು ವೇಳೆ ಟೆಂಡರ್‌ ಕರೆದಾಗ ಕಡಿಮೆ ಬೆಲೆಗೆ ಬಿಡ್‌ ಮಾಡುತ್ತದೆ. ಈ ಯೋಜನೆಗೆ ಚೀನಾದ ಬ್ಯಾಂಕುಗಳೇ ದೇಶಗಳಿಗೆ ಸಾಲ ನೀಡುವಂತೆ ನೋಡಿಕೊಳ್ಳುತ್ತದೆ. ಈ ಯೋಜನೆ ಸಾಲ ತೀರಿಸಲು ಆ ದೇಶಗಳಿಗೆ ಸಾಧ್ಯವಾಗದೇ ಇದ್ದಾಗ ಈ ಯೋಜನೆಯ ನೆಪ ಹೇಳಿ ಮತ್ತೊಂದು ಯೋಜನೆ ಆರಂಭಿಸಲು ಅನುಮತಿ ಕೇಳುತ್ತದೆ. ಹೀಗೆ ಒಂದೊಂದೆ ಯೋಜನೆ ಆರಂಭಿಸಿ ಈ ದೇಶವನ್ನು ತನ್ನ ದಾಳವನ್ನಾಗಿ ಮಾಡುತ್ತದೆ. ಸದ್ಯ ಪಾಕಿಸ್ತಾನದಲ್ಲಿ ಹೀಗೆ ಆಗುತ್ತಿದ್ದು, ಚೀನಾ ಹೇಳಿದಂತೆ ಅಲ್ಲಿನ ಸರ್ಕಾರ ಈಗ ಕೇಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *