3 ಸ್ಥಾನಕ್ಕೆ 6 ತಂಡಗಳ ಹೋರಾಟ -ಪ್ಲೇ ಆಫ್‌ಗೆ ಯಾರು ಹೇಗೆ ಎಂಟ್ರಿಯಾಗಬಹುದು?

Public TV
3 Min Read

ಬೆಂಗಳೂರು: ಐಪಿಎಲ್‌ ಲೀಗ್‌ ಆವೃತ್ತಿ ಮುಂದಿನ ವಾರಕ್ಕೆ ಕೊನೆಯಾಗುತ್ತಿದ್ದರೂ ಪ್ಲೇ ಆಫ್‌ ಯಾರು ಪ್ರವೇಶಿಸುತ್ತಾರೆ ಎನ್ನುವುದು ಇನ್ನೂ ನಿರ್ಧಾರವಾಗಲಿಲ್ಲ. ಗುರುವಾರದ ಪಂದ್ಯದಲ್ಲಿ ಕೋಲ್ಕತ್ತಾ ಸೋತಿರುವ ಕಾರಣ ಮುಂಬೈ ತಂಡ ಒಂದೇ ಇಲ್ಲಿಯವರೆಗೆ ಅಧಿಕೃತವಾಗಿ ಪ್ಲೇ ಆಫ್‌ ಪ್ರವೇಶಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಚೆನ್ನೈ ಹೊರತುಪಡಿಸಿ ಉಳಿದ ಎಲ್ಲ ತಂಡಗಳಿಗೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವಿದೆ. ಆದರೆ ಬೆಂಗಳೂರು ಮತ್ತು ಡೆಲ್ಲಿ ಅಂಕ ಪಟ್ಟಿಯಲ್ಲಿ 14 ಅಂಕಗಳಿಸಿರುವ ಜೊತೆಗೆ ಇನ್ನೂ 2 ಪಂದ್ಯಗಳನ್ನು ಆಡಲಿರುವ ಕಾರಣ ಅವಕಾಶ ಜಾಸ್ತಿಯಿದೆ. ಕೋಲ್ಕತ್ತಾ, ಪಂಜಾಬ್‌, ಹೈದರಾಬಾದ್‌, ರಾಜಸ್ಥಾನ ತಂಡಗಳು ಎಲ್ಲ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಅಂಕಪಟ್ಟಿಯಲ್ಲಿ 14 ಅಂಕದೊಂದಿಗೆ 2ನೇ ಸ್ಥಾನದಲ್ಲಿರುವ ಬೆಂಗಳೂರು ಇನ್ನೂ 2 ಪಂದ್ಯ ಆಡಬೇಕಿದೆ. +0.048 ರನ್‌ ರೇಟ್‌ ಹೊಂದಿದ್ದು, ಶನಿವಾರ ಹೈದರಾಬಾದ್‌ ಜೊತೆ ಇದ್ದರೆ ನ.2 ರಂದು ಡೆಲ್ಲಿ ಜೊತೆ ಪಂದ್ಯವಾಡಲಿದೆ. ಈ ಪೈಕಿ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್‌ ಪ್ರವೇಶಿಸಲಿದೆ. ಒಂದು ವೇಳೆ 2 ಪಂದ್ಯ ಸೋತರೆ ರನ್‌ ರೇಟ್‌ ಉತ್ತಮವಾಗಿದ್ದರೆ ಮಾತ್ರ ಪ್ಲೇ ಆಫ್‌ ಪ್ರವೇಶಿಸಬಹುದು.  ಇದನ್ನೂ ಓದಿ: ಓವರಿಗೆ 22 ರನ್‌ ಚಚ್ಚಿದ ವಾರ್ನರ್‌ – ಪವರ್‌ ಪ್ಲೇನಲ್ಲಿ ದಾಖಲೆ ಬರೆದ ಹೈದರಾಬಾದ್‌

ಡೆಲ್ಲಿ ಕ್ಯಾಪಿಟಲ್ಸ್‌: ಆರ್‌ಸಿಬಿ ಜೊತೆ 14 ಅಂಕಗಳಿಸಿದ್ದರೂ ನೆಟ್‌ ರನ್‌ ರೇಟ್‌ +0.030 ಇರುವ ಕಾರಣ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಶನಿವಾರ ಮುಂಬೈ ಜೊತೆ, ಸೋಮವಾರ ಬೆಂಗಳೂರನ್ನು ಎದುರಿಸಲಿದೆ. ಒಂದು ವೇಳೆ ಹೈದರಾಬಾದ್‌ ವಿರುದ್ಧ ಬೆಂಗಳೂರು, ಮುಂಬೈ ವಿರುದ್ಧ ಡೆಲ್ಲಿ ಸೋತರೆ ಸೋಮವಾರದ ಪಂದ್ಯ ಎರಡು ತಂಡಗಳಿಗೆ ಮಾಡು ಇಲ್ಲವೇ ಮಡಿ ಆಗಲಿದೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌: ಕೊನೆಯ 5 ಪಂದ್ಯಗಳನ್ನು ಗೆದ್ದು ಅಚ್ಚರಿ ರೂಪದಲ್ಲಿ ಮುನ್ನುಗ್ಗಿ ಬರುತ್ತಿರುವ ಪಂಜಾಬ್‌ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. -0.049 ನೆಟ್‌ ರನ್‌ ರೇಟ್‌ ಹೊಂದಿರುವ ಪಂಜಾಬ್‌ ಇಂದು ರಾಜಸ್ಥಾನ ಮತ್ತು ನ.1 ರಂದು ಚೆನ್ನೈ ತಂಡವನ್ನು ಎದುರಿಸಲಿದೆ. ಎರಡು ಪಂದ್ಯ ಗೆದ್ದರೆ 16 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ ಚೆನ್ನೈ ವಿರುದ್ಧ ಭಾರೀ ನೆಟ್‌ ರನ್‌ ರೇಟ್‌ ಅಂತರದಿಂದ ಗೆಲ್ಲಬೇಕಿದೆ. ಯಾಕೆಂದರೆ ಹೈದರಾಬಾದ್‌ ನೆಟ್‌ ರನ್‌ ರೇಟ್‌ ಉತ್ತಮವಾಗಿದ್ದು, ಒಂದು ವೇಳೆ ಎರಡು ಪಂದ್ಯ ಗೆದ್ದರೆ ನೆಟ್‌ ರನ್‌ ರೇಟ್‌ ಆಧಾರದ ಮೇಲೆ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 1 ರನ್‌ ಅಗತ್ಯವಿದ್ದಾಗ ಕೊಹ್ಲಿ 2 ರನ್‌ ಓಡಿದ್ದು ಯಾಕೆ?

ಕೋಲ್ಕತ್ತಾ ನೈಟ್‌ ರೈಡರ್ಸ್‌: ಗುರುವಾರ ಚೆನ್ನೈ ವಿರುದ್ಧದ ಪಂದ್ಯ ಗೆದ್ದಿದ್ದರೆ ಕೋಲ್ಕತ್ತಾ ಪ್ಲೇ ಆಫ್‌ ಹಾದಿ ಸುಗಮವಾಗುತ್ತಿತ್ತು. ಸೋತಿರುವ ಕಾರಣ ಒಂದು ಪಂದ್ಯ ಗೆದ್ದರೂ ನೆಟ್‌ ರನ್‌ ರೇಟ್‌ ಲೆಕ್ಕಾಚಾರವೇ ಮುಖ್ಯವಾಗುತ್ತದೆ. 13 ಪಂದ್ಯಗಳಿಂದ 12 ಅಂಕ ಪಡೆದಿರುವ ಕೋಲ್ಕತ್ತಾ -0.467 ನೆಟ್‌ ರನ್‌ ರೇಟ್‌ ಹೊಂದಿದೆ. ನ.1 ರಂದು ಕೋಲ್ಕತ್ತಾ ರಾಜಸ್ಥಾನದ ವಿರುದ್ಧ ಆಡಲಿದೆ. ಕೋಲ್ಕತ್ತಾ ಪ್ಲೇಆಫ್‌ಗೆ ಹೋಗಬೇಕಾದರೆ ಪಂಜಾಬ್‌ ಮತ್ತು ಹೈದರಾಬಾದ್‌ ಒಂದು ಪಂದ್ಯ ಸೋಲಬೇಕು ಮತ್ತು ರನ್‌ ರೇಟ್‌ ಮತ್ತಷ್ಟು ಕಡಿಮೆಯಾಗಬೇಕು.

ಸನ್‌ರೈಸರ್ಸ್‌ ಹೈದರಾಬಾದ್‌: 12 ಪಂದ್ಯಗಳಿಂದ 10 ಅಂಕ ಪಡೆದು ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿರುವ ಹೈದರಾಬಾದ್‌ ನೆಟ್‌ ರನ್‌ ರೇಟ್‌ನಲ್ಲಿ ಉತ್ತಮ ಸ್ಥಾನದಲ್ಲಿದೆ. +0.396 ನೆಟ್‌ ರನ್‌ ರೇಟ್‌ ಹೊಂದಿರುವ ಹೈದರಾಬಾದ್‌ ಶನಿವಾರ ಬೆಂಗಳೂರು ಮತ್ತು ನ.3ರಂದು ಮುಂಬೈ ತಂಡವನ್ನು ಎದುರಿಸಲಿದೆ. ಒಂದು ವೇಳೆ ಬೆಂಗಳೂರು ಮತ್ತು ಡೆಲ್ಲಿ ಒಂದು ಪಂದ್ಯ, ಪಂಜಾಬ್‌ ಎರಡೂ ಪಂದ್ಯವನ್ನು ಗೆದ್ದರೆ ಹೈದರಾಬಾದ್‌ ಪ್ಲೇ ಆಫ್‌ ಆಸೆ ಭಗ್ನವಾಗಲಿದೆ.

ರಾಜಸ್ಥಾನ ರಾಯಲ್ಸ್‌: 12 ಪಂದ್ಯಗಳಿಂದ 10 ಅಂಕ ಪಡೆದಿರುವ ರಾಜಸ್ಥಾನ ಪ್ಲೇ ಆಫ್‌ಗೆ ಹೋಗಬೇಕಾದರೆ ಪವಾಡವೇ ನಡೆಯಬೇಕು. -0.505 ನೆಟ್‌ ರನ್‌ ರೇಟ್‌ ಹೊಂದಿರುವ ರಾಜಸ್ಥಾನ ಇಂದು ಪಂಜಾಬ್‌ ಮತ್ತು ನ.1 ರಂದು ಕೋಲ್ಕತ್ತಾ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳನ್ನು ಗೆಲ್ಲುವುದು ಮುಖ್ಯವಲ್ಲ ಭಾರೀ ಅಂತರದಿಂದ ಗೆಲ್ಲಬೇಕು ಜೊತೆಗೆ ನೆಟ್‌ ರನ್‌ ರೇಟ್‌ ಏರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟ ಸಾಧ್ಯ. ಇಂದು ನಡೆಯುವ ಪಂದ್ಯದಲ್ಲಿ ರಾಜಸ್ಥಾನ ಭವಿಷ್ಯ ನಿರ್ಧಾರವಾಗಲಿದೆ.

ಚೆನ್ನೈ ತಂಡಕ್ಕೆ ಅವಕಾಶ ಇಲ್ಲದೇ ಇದ್ದರೂ ಪಂಜಾಬ್‌ ವಿರುದ್ಧ ಒಂದು ಪಂದ್ಯ ಆಡಲು ಬಾಕಿಯಿದೆ. ಒಂದು ವೇಳೆ ಈ ಪಂದ್ಯವನ್ನು ಚೆನ್ನೈ ಗೆದ್ದರೆ ಪಂಜಾಬ್‌ ಪ್ಲೇ ಆಫ್‌ ಹಾದಿ ಕಷ್ಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *