ಚಿಕ್ಕಮಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಸಹ ಹೆಚ್ಚಾಗುತ್ತಿದೆ. ಅದರಲ್ಲೂ ಚಿಕ್ಕಮಗಳೂರಿಗೆ ಹೆಚ್ಚು ಜನ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ.
ಗುಡ್ ಫ್ರೈಡೆ, ಶನಿವಾರ, ಭಾನುವಾರ ವೀಕ್ ಎಂಡ್. ಮೂರು ದಿನ ನಿರಂತರವಾಗಿ ರಜೆ ಇದ್ದ ಕಾರಣ ಕಾಫಿನಾಡಲ್ಲಿ ಪ್ರವಾಸಿಗರ ಸಂತೆ ಏರ್ಪಟ್ಟಿತ್ತು. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಜನವೋ ಜನ.
ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಮೂರು ದಿನದಲ್ಲಿ ಕೇವಲ ಗಿರಿಭಾಗಕ್ಕೆ ಸುಮಾರು 1,200 ರಿಂದ 1,250 ಕಾರುಗಳಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. 270 ರಿಂದ 300 ಬೈಕ್‍ಗಳು ಹಾಗೂ 100 ರಿಂದ 110 ಟಿಟಿ ವಾಹನದಲ್ಲಿ ಪ್ರವಾಸಿಗರು ಬಂದಿದ್ದಾರೆ. ಸುಮಾರು 8 ರಿಂದ 9 ಸಾವಿರದಷ್ಟು ಪ್ರವಾಸಿಗರು ತಾಲೂಕಿನ ಗಿರಿಭಾಗಕ್ಕೆ ಮಾತ್ರ ಭೇಟಿ ನೀಡಿದ್ದಾರೆ.
ಕೊರೊನಾ ಕಾಲದಲ್ಲಿ ಪಾಲಿಸಬೇಕಾದ ಕ್ರಮಗಳನ್ನು ಮರೆತಿದ್ದು, ಶೇ.100ರಲ್ಲಿ ಶೇ.60 ರಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ, ಸಾಮಾಜಿಕ ಅಂತರ ಸಂಪೂರ್ಣ ಕಣ್ಮರೆಯಾಗಿತ್ತು.
ತಾಲೂಕಿನ ಕೈಮರ ಚೆಕ್‍ಪೋಸ್ಟ್ ಬಳಿ ಸಿಬ್ಬಂದಿ ಪ್ರತಿ ಗಾಡಿಯನ್ನೂ ತಡೆದು ಎಲ್ಲರಿಗೂ ಮುಖಕ್ಕೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡುತ್ತಿದ್ದಾರೆ. ಕೆಳಗಡೆ ಆಯ್ತು ಎಂದು ಹೇಳುವ ಪ್ರವಾಸಿಗರು, ಮೇಲೆ ಹೋಗಿ ಮತ್ತದೇ ಬೇಜಾವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.