3 ದಿನದಲ್ಲಿ ಸೌಲಭ್ಯ ನೀಡದಿದ್ರೆ ಬೆಂಗ್ಳೂರು ಚಲೋ- ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ

Public TV
2 Min Read

ನೆಲಮಂಗಲ: ಕೋವಿಡ್ 19 ಹೋರಾಟದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ವಿಮೆ ಮತ್ತು ಇನ್ನಿತರ ಸೌಲಭ್ಯ ನೀಡಲು ಸರ್ಕಾರಕ್ಕೆ ಮೂರು ದಿನ ಗಡುವು ನೀಡಿದ್ದೇವೆ. ಒಂದು ವೇಳೆ ಸರ್ಕಾರ ಈ ಸೌಲಭ್ಯ ನೀಡಲು ಮುಂದಾಗದಿದ್ದರೆ ಬೆಂಗಳೂರು ಚಲೋಗೆ ಸಿದ್ಧ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 19 ರೋಗಕ್ಕೆ ಕೇಂದ್ರ ಹಾಗೂ ರಾಜ್ಯದ ಹಣವನ್ನ ಒಟ್ಟಿಗೆ ನೀಡಿ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ವಿಮೆ ಎಲ್ಲಾ ಆದಷ್ಟೂ ಬೇಗ ಮಾಡಿಸಿ. ಆಶಾ ಕಾರ್ಯಕರ್ತೆಯರಿಗೆ 3,000 ಸಹಾಯ ಧನ ನೀಡಿ. ಇಡೀ ರಾಜ್ಯದಲ್ಲಿ ಶೇ.10 ರಷ್ಟು ಜನರಿಗೆ ಮಾತ್ರ ಕೊಟ್ಟಿದ್ದು, ಯಡಿಯೂರಪ್ಪ ಸರ್ಕಾರ ನುಡಿದಂತೆ ನಡೆಯಲಿಲ್ಲ ಎಂದು ಗುಡುಗಿದ್ದಾರೆ.

ಮಾರಣಾಂತಿಕ ಕೋವಿಡ್ ಸಂದರ್ಭದಲ್ಲಿಯೂ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ನೀವು ಅಗತ್ಯ ಸೌಲಭ್ಯ ಕೊಡಲಿಲ್ಲ ಅಂದ್ರೆ ನಾನೇ ಹೋರಾಟ ನಡೆಸುವೆ. ಎಲ್ಲಾ ಆಶಾ ಕಾರ್ಯಕರ್ತೆಯರ ಬೆಂಬಲ ಪಡೆದು ಬೆಂಗಳೂರು ಚಲೋ ಕಾರ್ಯಕ್ರಮವನ್ನ ರೂಪಿಸುವೆ. ರಾಜ್ಯದ ಎಲ್ಲಾ ಹೆಣ್ಣು ಮಕ್ಕಳು ಬಂದು ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಬಿಐಇಸಿಯ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್ ವಿಚಾರವಾಗಿ ಕಾಂಗ್ರೆಸ್ ಪಕ್ಷದವರಿಗೆ ಕ್ವಾಲಿಟಿ ಬಗ್ಗೆ ಗೊತ್ತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ಅವರಷ್ಟು ಬುದ್ಧಿವಂತರಲ್ಲ, ಬದಲಾಗಿ ನಾವು ಪ್ರಜ್ಞಾವಂತರು, ಆ ಬೆಡ್‍ಗಳು ನಮ್ಮ ಮಕ್ಕಳಿಗೆ ಬೇಕಿಲ್ಲ. ಅವುಗಳನ್ನ ಮಂತ್ರಿಗಳು ಶಾಸಕರ ಮನೆಗೆ ಹಾಕಿಕೊಳ್ಳಲಿ, ಲಾಕ್‍ಡೌನ್ ಬಳಕೆ ಮಾಡಲು ಬರಲಿಲ್ಲ. ಇನ್ನೂ ಒಂದು ತಿಂಗಳು ಮಾಡಿದರೂ ನಿಮ್ಮ ಕೈಯಲ್ಲಿ ಎಲ್ಲವನ್ನ ಸರಿಪಡಿಸಿಕೊಳ್ಳಲು ಆಗಲ್ಲ. ನಿಮಗೆ ಅಧಿಕಾರದಲ್ಲಿರಲು ಯಾವುದೇ ಅರ್ಹತೆ ಇಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರದ್ದು ಬಿಡಿ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಪ್ರಜ್ಞೆ ಇದೆಯಾ ಎಂದು ಪ್ರಶ್ನಿಸಿದ ಡಿಕೆಶಿ, ನಿಮಗೆ ನೀವೇ ಅರ್ಥಮಾಡಿಕೊಳ್ಳಿ ಎಂದು ಸರ್ಕಾರಕ್ಕೆ ಟಾಂಗ್ ನೀಡಿದರು. ನಂತರ ನೆಲಮಂಗಲದಲ್ಲಿ ಆಶಾ ಕಾರ್ಯಕರ್ತೆಯೊದಿಗೆ ಚರ್ಚೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದ್ದು, ಕೆಪಿಸಿಸಿ ಅಧ್ಯಕ್ಷರ ಮುಂದೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅಳಲು ತೊಡಿಕೊಂಡರು. ನೆಲಮಂಗಲ ನಗರದ ವೀವರ್ರ್ ಕಾಲೋನಿಯಲ್ಲಿ ಡಿಕೆಶಿ ಆಶಾ ಕಾರ್ಯಕರ್ತೆಯರನ್ನು ಸಂತೈಸಿದರು. ವೇತನ ಸೇರಿದಂತೆ ಕೋವಿಡ್ ವೇಳೆ ಸಾಕಷ್ಟು ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಸರ್ಕಾರದಿಂದ ಸೂಕ್ತ ಸೌಲಭ್ಯ ಕೊಡಿಸುವಂತೆ ಡಿಕೆಶಿ ಬಳಿ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *