– ಆರೋಗ್ಯವಂತರ ಮೇಲೆ ನಡೆಯಲಿದೆ ಸಂಶೋಧನೆ
– ಪ್ರಯೋಗಕ್ಕೆ ಒಳಗಾದವರಿಗೆ ಸಿಗಲಿದೆ 4 ಲಕ್ಷ ರೂ.
ಲಂಡನ್: ಆರೋಗ್ಯವಂತರಾಗಿರುವ 2,500 ಮಂದಿಗೆ ಕೊರೊನಾ ಸೋಂಕು ಹಬ್ಬಿಸಿ ಸಂಶೋಧನೆ ನಡೆಸಲು ಬ್ರಿಟನ್‍ನಲ್ಲಿ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ.
ಬ್ರಿಟನ್‍ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಂತಹ ಹಲವು ನಿರ್ಬಂಧಗಳನ್ನು ಬ್ರಿಟನ್ ಹೇರಿದೆ. ಆದರೆ ಬ್ರಿಟನ್ ವಿಜ್ಞಾನಿಗಳು ಮಾತ್ರ ಆರೋಗ್ಯವಂತರಿಗೆ ಸೋಂಕು ತಗುಲಿಸಿ ಸಂಶೋಧನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕೊರೊನಾ ಹಬ್ಬಿ ಸುಮಾರು ಒಂದು ವರ್ಷವೇ ಕಳೆದಿದೆ. ಆದರೆ ಇನ್ನೂ ವೈರಸ್ ಅನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊರೊನಾ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲು ವೈರಸ್ ಹಬ್ಬಿಸಲು ವಿಜ್ಞಾನಿಗಳು ತಯಾರಾಗಿದ್ದಾರೆ. ಸೋಂಕು ತಗುಲಿಸಿಕೊಳ್ಳುವ 2,500 ಮಂದಿಗೆ 4 ಲಕ್ಷ ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ.
ಉದ್ದೇಶವೇನು?
ಮಾನವನ ದೇಹದಲ್ಲಿ ಯಾವ ರೀತಿಯಾಗಿ ವೈರಸ್ ವರ್ತನೆ ತೋರುತ್ತದೆ. ಹೇಗೆ ಅಭಿವೃದ್ಧಿಗೊಳ್ಳುತ್ತದೆ? ಎಷ್ಟು ಸಮಯ ಬೇಕು ಎಂಬುದನ್ನು ತಿಳಿಯುವುದು ವಿಜ್ಞಾನಿಗಳ ಉದ್ಧೇಶವಾಗಿದೆ. ಕೊರೋನಾವನ್ನು ನಿಯಂತ್ರಿಸಲು ವಿಜ್ಞಾನಿಗಳು ಈ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಬ್ರಿಟನ್ ಸರ್ಕಾರ ಏನು ಹೇಳುತ್ತೆ ?
ಈ ಸಂಶೋಧನೆಗೆ ಬ್ರಿಟನ್ ಸರ್ಕಾರ 45 ದಶಲಕ್ಷ ಡಾಲರ್(ಅಂದಾಜು 330 ಕೋಟಿ ರೂ.) ಮಂಜೂರು ಮಾಡಿದೆ. ಬ್ರಿಟನ್ ಇಂಪೀರಿಯಲ್ ಕಾಲೇಜು, ರಾಷ್ಟ್ರೀಯ ಆರೋಗ್ಯ ಸೇವೆಯ ರಾಯಲ್ ಫ್ರೀ ಆಸ್ಪತ್ರೆ ಹಾಗೂ ಔಷಧ ಕಂಪನಿ ಎಚ್‍ವೀವೋಗಲೂ ಈ ಕಾರ್ಯದಲ್ಲಿ ಭಾಗಿಯಾಗಲಿವೆ.
ಯಾರ ಮೇಲೆ ಈ ಪ್ರಯೋಗ ನಡೆಯುತ್ತದೆ?
18-30 ವರ್ಷ ವಯೋಮಿತಿಯ 2500 ಆರೋಗ್ಯವಂತರಿಗೆ ಮೊದಲಿಗೆ ಮೂಗಿನ ಮೂಲಕ ಕೊರೋನಾ ಲಸಿಕೆಯನ್ನು ನೀಡಲಾಗುತ್ತದೆ. ನಂತರ ಕೊರೊನಾ ವೈರಸ್ ಅನ್ನು ದೇಹಕ್ಕೆ ತಲುಪುವಂತೆ ಮಾಡಲಾಗುತ್ತದೆ. ಹೀಗೆ ಸೋಂಕು ತಗುಲಿಸಿಕೊಂಡವರನ್ನು ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ನಿಗಾ ಇಡಲಾಗುತ್ತದೆ. ಈ ಪ್ರಯೋಗಕ್ಕೆ ಒಳಪಟ್ಟ ಪ್ರತಿಯೊಬ್ಬರಿಗೂ 4 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ವರದಿಯಾಗಿದೆ.
ಪರೀಕ್ಷೆ ನಡೆಸಬಹುದೇ?
ಬ್ರಿಟನ್ ಸರ್ಕಾರ ಜನವರಿಯಲ್ಲಿ ಈ ರೀತಿಯ ಪರೀಕ್ಷೆ ನಡೆಸಲು ಮುಂದಾಗುತ್ತಿದ್ದಂತೆ ಆಕ್ಷೇಪ ವ್ಯಕ್ತವಾಗಿದೆ. ಮಾನವರ ಮೇಲೆ ಸೋಂಕು ಹಬ್ಬಿಸಿ ಪರೀಕ್ಷೆ ನಡೆಸುವುದು ಎಷ್ಟು ಸರಿ? ಹಣ ಸಿಗುತ್ತದೆ ಎಂಬ ಕಾರಣಕ್ಕೆ ಭಾಗಿಯಾಗಿ ಭವಿಷ್ಯದಲ್ಲಿ ವ್ಯಕ್ತಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾದರೆ ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ.
ಈ ನಡೆಯನ್ನು ಸಮರ್ಥಿಸಿಕೊಂಡ ಕೆಲವರು ಭವಿಷ್ಯದಲ್ಲಿ ಕೊರೊನಾಗಿಂತ ಮಾರಕವಾದ ಮಾರಣಾಂತಿಕ ಸೋಂಕುಗಳು ಬರಬಹುದು. ಈ ವೇಳೆ ಪ್ರಾಣಿಗಳ ಮೇಲೆ ಲಸಿಕೆ/ ಔಷಧಿ ಪ್ರಯೋಗ ಮಾಡಿ ಅದರ ಫಲಿತಾಂಶ ಪಡೆಯುವಾಗ ಹಲವು ವರ್ಷಗಳು ಆಗಬಹುದು. ಹೀಗಾಗಿ ಮನುಷ್ಯರ ಮೇಲೆ ಪ್ರಯೋಗ ನಡೆಸಿದರೆ ತಪ್ಪೇನಿಲ್ಲ ಎಂದು ಹೇಳುತ್ತಿದ್ದಾರೆ.
ಆರೋಗ್ಯವಂತರ ಮೇಲೆ ನಡೆಸುವ ಈ ಪ್ರಯೋಗಕ್ಕೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ