250 ರೂ. ಊಟ ಆರ್ಡರ್ ಮಾಡಿ 50 ಸಾವಿರ ರೂ. ಕಳ್ಕೊಂಡ್ಳು!

Public TV
1 Min Read

ಬೆಂಗಳೂರು: ದಿನದಿಂದ ದಿನ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸದ್ಯ ಮಹಿಳೆಯೊಬ್ಬರು ಫೇಸ್‍ಬುಕ್‍ನ ಜಾಹೀರಾತುವೊಂದನ್ನು ನಂಬಿ 50 ಸಾವಿರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ವಲಯದ ಯಲಚೇನಹಳ್ಳಿ ನಿವಾಸಿಯಾದ ಸವಿತಾ ಶರ್ಮಾ ಫೇಸ್‍ಬುಕ್‍ನಲ್ಲಿ 250ರೂ ಬೆಲೆಯ ಒಂದು ಥಾಲಿ ಆರ್ಡರ್ ಮಾಡಿದರೆ ಎರಡು ಥಾಲಿ ಉಚಿತವಾಗಿ ನೀಡಲಾಗುತ್ತದೆ ಎಂಬ ಜಾಹೀರಾತನ್ನು ನೋಡಿದ್ದಾರೆ.

 

ಊಟ ಆರ್ಡರ್ ಮಾಡಲು ಜಾಹೀರಾತಿನಲ್ಲಿ ನಮೂದಿಸಲಾಗಿದ್ದ ಸಂಖ್ಯೆಗೆ ಸವಿತಾ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ವ್ಯಕ್ತಿ ಆರ್ಡರ್ ಮಾಡುವುದಕ್ಕೂ ಮುನ್ನ 10 ರೂ ಪಾವತಿಸಬೇಕಾಗುತ್ತದೆ. ನಂತರ ಆಹಾರವನ್ನು ಮನೆಯ ಬಾಗಿಲಿಗೆ ತಲುಪಿಸಿದ ನಂತರ ಉಳಿದ ಹಣವನ್ನು ನಗದು ರೂಪದಲ್ಲಿ ಪಾವತಿಸಬಹುದು ಎಂದು ಹೇಳಿದ್ದಾನೆ.

ಬಳಿಕ ಫಾರ್ಮ್‍ವೊಂದನ್ನು ಭರ್ತಿ ಮಾಡಲು ಸವಿತಾ ಮೊಬೈಲ್‍ಗೆ ಲಿಂಕ್ ಕಳುಹಿಸಲಾಗಿದೆ. ಈ ಫಾರ್ಮ್‍ನಲ್ಲಿ ಅವರು ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಮತ್ತು ಪಿನ್ ಸಂಖ್ಯೆಯನ್ನು ನಮೂದಿಸಿದ್ದಾರೆ. ತಕ್ಷಣ ಕೆಲವೇ ನಿಮಿಷಗಳಲ್ಲಿ 49,996 ರೂ. ಅವರ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗಿರುವ ಮೆಸೇಜ್ ಅವರ ಮೊಬೈಲ್‍ಗೆ ಬರುತ್ತದೆ.

ಗಾಬರಿಗೊಂಡು ಸವಿತಾ ಅದೇ ಸಂಖ್ಯೆಗೆ ಪುನಃ ಕರೆ ಮಾಡಿದಾಗ, ಸೆಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂಬ ಮಾಹಿತಿ ಬಂದಿದೆ.

ಈ ಘಟನೆ ಮಂಗಳವಾರ ನಡೆದಿದ್ದು, ಮರುದಿನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದು ಜಾಹೀರಾತಿನಲ್ಲಿ ರೆಸ್ಟೋರೆಂಟ್ ವಿಳಾಸ ಸದಾಶಿವನಗರ ಎಂದು ತಿಳಿದು ಬಂದಿದೆ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *