2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕೊರೊನಾ

Public TV
2 Min Read

– ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ 325 ಜನರಿಗೆ ನಿರ್ಬಂಧ

ಮುಂಬೈ: 2 ವರ್ಷದ ಗಂಡು ಮಗು ಸೇರಿ ಒಂದೇ ಕುಟುಂಬದ 25 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

ಈ ಕುಟುಂಬದ ನಾಲ್ಕು ಜನರು ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಹೋಗಿ ವಾಪಸ್ ಆಗಿದ್ದರು. ಈ ನಾಲ್ವರಿಗೆ ಮಾರ್ಚ್ 19ರಂದು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆಗ ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ನಾಲ್ವರನ್ನು ಮಾರ್ಚ್ 19ರಂದು ಮೀರಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದಾದ ನಂತರ ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದರಿಂದ ಭಯಬಿದ್ದ ಸರ್ಕಾರ ಕುಟುಂಬದ ಎಲ್ಲಾ ಸದಸ್ಯರನ್ನು ಚಿಕಿತ್ಸೆಗೆ ಒಳಪಡಿಸಿದ್ದರು. ಈ ವೇಳೆ ಮಾರ್ಚ್ 27 ಇದೇ ಕುಟುಂಬದ ಮೂವರಿಗೂ ಮತ್ತೆ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿತ್ತು. ಈ ಮೂಲಕ ಕುಟುಂಬದ 12 ಮಂದಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು.

ಈ 12 ಜನ ಆದ ಮೇಲೆ ಪರೀಕ್ಷೆ ಮಾಡಿದ ಕುಟುಂಬ ಉಳಿದ 13 ಜನರಲ್ಲೂ ಇಂದು ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇದರಲ್ಲಿ ಎರಡು ವರ್ಷದ ಗಂಡು ಮಗುವಿದೆ. ಹೀಗಾಗಿ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಸುಮಾರು 325 ಜನರನ್ನು ಸರ್ಕಾರ ಹೋಂ ಕ್ವಾರೆಂಟೈನ್ ಇರುವಂತೆ ಸೂಚಿಸಿದ್ದು, ಜೊತೆಗೆ ಸೋಂಕಿತರನ್ನು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ವೈದ್ಯಾಧಿಕಾರಿ ಸುಲಿಂಖೆ, ಈ ಕುಟುಂಬದವರು ಪರಸ್ಪರ ಒಟ್ಟಿಗೆ ಇದ್ದರು. ಕುಟುಂಬದವರೆಲ್ಲ ಒಟ್ಟಿಗೆ ಇದ್ದ ಕಾರಣ ಕೊರೊನಾ ಎಲ್ಲರಿಗೂ ಹಬ್ಬಿದೆ. ಕೊರೊನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದರೆ ಆ ಜಾಗದಲ್ಲಿ ವೈರಸ್ ಬಿದ್ದಿರುತ್ತದೆ. ಅದನ್ನು ಮನೆಯವರು ಮಟ್ಟಿದರೆ ಅವರಿಗೂ ಸೋಂಕು ಹರಡುತ್ತದೆ. ಹೀಗಾಗಿ ಈಗ ಕುಟುಂಬದ ಎಲ್ಲರಿಗೂ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿಜೀತ್ ಚೌಧರಿ, 25 ಸೋಂಕಿತರು ದೊಡ್ಡ ಕುಟುಂಬಕ್ಕೆ ಸೇರಿದವರು ಎಂದು ದೃಢಪಟ್ಟಿದೆ. ಈ ಕುಟುಂಬ ಸಾಂಗ್ಲಿಯ ಇಸ್ಲಾಂಪುರ್ ತಹಸಿಲ್ನಲ್ಲಿ ಇರುವ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದೆ. ಇತ್ತೀಚೆಗೆ ಈ ಕುಟುಂಬದ ನಾಲ್ಕು ಜನರು ವಿದೇಶಕ್ಕೆ ಹೋಗಿ ಸೋಂಕಿಗೆ ಒಳಗಾಗಿದ್ದಾರೆ. ಈ ನಾಲ್ವರು ವಾಪಸ್ ಬಂದಾಗ ಮನೆಯವರು ಇವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಕಾರಣ ಎಲ್ಲರಿಗೂ ರೋಗ ತಗುಲಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *