25 ಕೋತಿಗಳ ದಾರುಣ ಸಾವು – ವಾನರಗಳಿಗೆ ವಿಷವುಣಿಸಿ ಕೊಂದ್ರಾ ಪಾಪಿಗಳು?

Public TV
1 Min Read

ಚಿಕ್ಕಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಸತ್ತ ಕೋತಿಗಳನ್ನು ಬಿಸಾಡುತ್ತಿದ್ದುದನ್ನು ಕಂಡ ಸಾರ್ವಜನಿಕರು ಕೋತಿಗಳ ಸಮೇತ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.

ತಡರಾತ್ರಿ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಬಳಿಯ ನಿರ್ಜನ ಪ್ರದೇಶವೊಂದರ ಬಳಿ ಟ್ರ್ಯಾಕ್ಟರ್ ಮೂಲಕ 30 ಕ್ಕೂ ಹೆಚ್ಚು ಕೋತಿಗಳನ್ನು ಬೋನಿನ ಮೂಲಕ ತಂದು ಬಿಸಾಡಲಾಗುತ್ತಿತ್ತು. ಅವುಗಳಲ್ಲಿ 25 ಕೋತಿಗಳು ಅದಾಗಲೇ ಮೃತಪಟ್ಟಿದ್ದು ಉಳಿದ ಐದಾರು ಕೋತಿಗಳು ನಿತ್ರಾಣ ಸ್ಥಿತಿಯಲ್ಲಿದ್ದವು. ಇದನ್ನ ಕಂಡ ಗೌರಿಬಿದನೂರಿನ ಯುವಕರು ಟ್ರ್ಯಾಕ್ಟರ್ ಸಮೇತ ಚಾಲಕ ಭಾಷಾ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಷಯ ತಿಳಿದು ಗೌರಿಬಿದನೂರು ಅರಣ್ಯ ಇಲಾಖಾಧಿಕಾರಿಗಳು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ಚಾಲಕ ಭಾಷಾ ನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಕೋತಿಗಳನ್ನು ಜರಬಂಡಹಳ್ಳಿ ಗ್ರಾಮದಲ್ಲಿ ಹಿಡಿದು ಬೋನಿಗೆ ಹಾಕಿಕೊಂಡಿದ್ದಾರೆ. ಕೋತಿಗಳ ಕಾಟ ತಾಳಲಾರದೆ ಗ್ರಾಮದ ಕೆಲವರು ಕೋತಿಗಳನ್ನು ಹಿಡಿಸಿ ಬೋನಿಗೆ ಹಾಕಿ ಬೇರೆಡೆಗೆ ಸಾಗಾಟ ಮಾಡಲು ಮುಂದಾಗಿದ್ದರಂತೆ. ಆದರೆ ಚಿಕ್ಕ ಬೋನಿನಲ್ಲಿ ಜಾಸ್ತಿ ಕೋತಿಗಳನ್ನ ಹಾಕಿ ಬೆಳಗ್ಗೆಯಿಂದ ರಾತ್ರಿಯವರೆಗೆ ಬೋನಿನಲ್ಲೇ ಇದ್ದ ಕೋತಿಗಳು, ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರಬಹುದು ಅಂತ ಮರಣೋತ್ತರ ಪರೀಕ್ಷಾ ವರದಿಯಿಂದ ಪ್ರಾಥಮಿಕ ಮಾಹಿತಿ ಲಭಿಸಿದೆ.

ಆದರೆ ಈ ಕೋತಿಗಳಿಗೆ ವಿಷಹಾರ ನೀಡಿ ಕೊಂದಿದ್ದಾರೆ ಎಂದು ಆರೋಪಗಳು ಕೇಳಿಬಂದಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ಮರಣೋತ್ತರ ಪರೀಕ್ಷೆಯ ನಂತರ ಮೃತ ಮಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಅಸಲಿ ಸತ್ಯ ಹೊರಬೀಳಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *