ಹೈದರಾಬಾದ್: ಟಿಕ್‍ಟಾಕ್ ವಿಡಿಯೋ ಮಾಡುವಾಗ ಈಗಾಗಲೇ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ ಯುವಕನೊಬ್ಬ ಕೆರೆಯಲ್ಲಿ ನಿಂತು ಟಿಕ್‍ಟಾಕ್ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೈದರಾಬಾದ್‍ನ ಮೇಡ್ಚಲ್ ಜಿಲ್ಲೆಯ ದುಲಪಲ್ಲಿ ಕೆರೆಯಲ್ಲಿ ನಡೆದಿದೆ.
ನರಸಿಂಹ(24) ಮೃತ ಯುವಕ. ನರಸಿಂಹ ತನ್ನ ಸ್ನೇಹಿತ ಪ್ರಶಾಂತ್‍ನೊಂದಿಗೆ ದುಲಪಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದನು. ನಂತರ ಇಬ್ಬರು ಟಿಕ್‍ಟಾಕ್ ವಿಡಿಯೋಗೆ ಪೋಸ್ ನೀಡಲು ಕೆರೆಗೆ ಇಳಿದಿದ್ದರು. ಬಳಿಕ ಪ್ರಶಾಂತ್‍ನೊಂದಿಗೆ ನೀರಿನಲ್ಲಿ ನಿಂತು ನರಸಿಂಹ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದನು.
ಸ್ನೇಹಿತ ಪ್ರಶಾಂತ್ ಮೊಬೈಲ್ ಫೋನ್‍ನಲ್ಲಿ ಟಿಕ್‍ಟಾಕ್ ರೆಕಾರ್ಡ್ ಮಾಡುತ್ತಿದ್ದನು. ಈ ವೇಳೆ ನರಸಿಂಹ ಪ್ರಶಾಂತ್‍ನಿಂದ ದೂರ ಹೋಗಿ ವಿಡಿಯೋಗೆ ಪೋಸ್ ನೀಡಿದ್ದಾನೆ. ಆಗ ನರಸಿಂಹ ಆಕಸ್ಮಿಕವಾಗಿ ನೀರು ಆಳವಾಗಿದ್ದ ಸ್ಥಳದಲ್ಲಿ ಜಾರಿ ಬಿದ್ದಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ.
ತಕ್ಷಣ ಪ್ರಶಾಂತ್ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಆದರೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ನರಸಿಂಹನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಗುರುವಾರ ಮೃತದೇಹವನ್ನು ಮೇಲೆತ್ತಿದ್ದಾರೆ.