ಅಮೇಥಿ, ರಾಯ್‌ಬರೇಲಿ ಹೈವೋಲ್ಟೇಜ್‌ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಘೋಷಣೆ ಸಾಧ್ಯತೆ!

Public TV
2 Min Read

– ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಬಹುತೇಕ ಖಚಿತ
– ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿಯುತ್ತಾ ರಾಯ್‌ ಬರೇಲಿ?

ನವದೆಹಲಿ: ಉತ್ತರ ಪ್ರದೇಶದ ಎರಡು ಹೈವೊಲ್ಟೇಜ್ ಕ್ಷೇತ್ರಗಳಾದ ಅಮೇಥಿ ಮತ್ತು ರಾಯ್‌ಬರೇಲಿಯಿಂದ (Amethi, Raebareli) ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಇರುವುದರಿಂದ ಇಂದೇ ಈ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೈಕಮಾಂಡ್‌ ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ.

ಸೋನಿಯಾ ಗಾಂಧಿ (Sonia Gandhi) ರಾಜ್ಯಸಭೆಗೆ ಆಯ್ಕೆಯಾಗಿದ್ದು, ವಯನಾಡ್ ನಿಂದ ರಾಹುಲ್ ಗಾಂಧಿ (Rahul Gandhi) ಸ್ಪರ್ಧಿಸಿರುವ ಹಿನ್ನೆಲೆ ಅಮೇಥಿಯಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎನ್ನುವ ಚರ್ಚೆಗಳು ಹುಟ್ಟುಕೊಂಡಿದ್ದವು. ಅಲ್ಲದೇ ಕಾಂಗ್ರೆಸ್ ಕೂಡಾ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೇ ಕುತೂಹಲ ಹೆಚ್ಚಿಸಿತ್ತು. ಈ ಹಿಂದೆ ಅಮೇಥಿಯಿಂದ ರಾಹುಲ್‌ ಗಾಂಧಿ ಹೆಸರು ಕೇಳಿಬಂದಿದ್ದರೂ, ಬಳಿಕ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬಂದಿತ್ತು. ಇದೀಗ ರಾಗಾ ಅವರೇ ಸೂಕ್ತ ಎಂದು ಪಕ್ಷ ನಿರ್ಧರಿಸಿದೆ, ಇಂದು ಅಧಿಕೃತವಾಗಿ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

2019ರ ಚುನಾವಣೆಯಲ್ಲಿಯೂ ರಾಹುಲ್‌ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿದ್ದರು. ಆದ್ರೆ ಬಿಜೆಪಿಯ ಸ್ಮೃತಿ ಇರಾನಿ ಅವರ ವಿರುದ್ಧ ಸೋಲು ಎದುರಿಸಬೇಕಾಯಿತು. ಈ ಬಾರಿಯೂ ಬಿಜೆಪಿಯಿಂದ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿಯುತ್ತಾ ರಾಯ್‌ಬರೇಲಿ?
1960 ರಿಂದ ರಾಯ್‌ಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಕೂಡಾ ಇಲ್ಲಿಂದ ಸ್ಪರ್ಧಿಸಿದ್ದರು. 1952 ಮತ್ತಯ 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಫಿರೋಜ್‌ ಗಾಂಧಿ ಎರಡು ಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗ ಅರುಣ್ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನೆಹರೂ ಸಹೋದರಿ ಶೀಲಾ ಕೌಲ್ 1989 ಮತ್ತು 1991 ರಲ್ಲಿ ಗೆಲುವು ಸಾಧಿಸಿದರು.

ಅಲ್ಲದೇ 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು‌. ಸೋನಿಯಾ ಗಾಂಧಿ ರಾಜ್ಯಸಭೆ ಆಯ್ಕೆ ಬಳಿಕ ಪ್ರಿಯಾಂಕಾ ಗಾಂಧಿ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ ಅಭ್ಯರ್ಥಿಯ ಘೋಷಣೆ ವಿಳಂಭವಾದರೂ ಪಕ್ಷಕ್ಕೆ ಆತಂಕ ಇಲ್ಲ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

Share This Article